
Udupi: ಬ್ರಹ್ಮಗಿರಿ ಸರ್ಕಲ್ ಗೆ 'ಆಸ್ಕರ್ ಫೆರ್ನಾಂಡಿಸ್' ಹೆಸರು; ಯಶ್ಪಾಲ್ ಗೆ ಕೌಂಟರ್ ನೀಡಿದ MLA ರಘುಪತಿ ಭಟ್!
ಉಡುಪಿ: ಬಿ.ಜೆ.ಪಿ ನಾಯಕರ ನಡುವಿನ ಕೋಲ್ಡ್ ವಾರ್ ನಿಂದ ಉಡುಪಿಯಲ್ಲಿ "ಸಾವರ್ಕರ್ ಸರ್ಕಲ್" ಇಲ್ಲವಾಯಿತೇ..? "ಹಿಂದೂ ಪರ" ಸಂಘಟನೆಯ ಸಾಕಷ್ಟು ದಿನಗಳ ಬೇಡಿಕೆಗೆ ಬಿ.ಜೆ.ಪಿ ಶಾಸಕರಿಂದಲೇ ಎಳ್ಳು ನೀರು ಬಿಡಲಾಯಿತೇ? ಸಾವರ್ಕರ್ ಗೆ ಬದಲಾಗಿ ಬಿ.ಜೆ.ಪಿ ನಾಯಕರಿಗೆ ಆಸ್ಕರ್ ಫೆರ್ನಾಂಡಿಸ್ ಕಾಣಿಸಿಕೊಂಡ್ರೇ? ಫೆರ್ನಾಂಡಿಸ್ ಜೊತೆ ಶಾಸಕರಿದ್ದ ಋಣವೇ ಹೀಗೆ ಮಾಡಿತೇ? ಹೌದು, ಸದ್ಯ ಉಡುಪಿಯ ಬ್ರಹ್ಮಗಿರಿ ಸರ್ಕಲ್ ಗೆ ಕೇಂದ್ರದ ಮಾಜಿ ಸಚಿವ ದಿವಂಗತ ಆಸ್ಕರ್ ಫೆರ್ನಾಂಡಿಸ್ ಹೆಸರಿಟ್ಟಿದ್ದು ಮಾತ್ರವಲ್ಲದೇ ಸರಕಾರದಿಂದಲೇ ಆದೇಶ ನೀಡುವ ಮೂಲಕ ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್ ಹಾಗೂ ಬಿ.ಜೆ.ಪಿ ಹಿಂದೂಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ 'ಕೋಲ್ಡ್ ವಾರ್' ತೆರೆ ಮೇಲೆ ಬರುವಂತಾಗಿದೆ. ಇದು ಹೊಸ ಚರ್ಚೆಗೆ ನಾಂದಿ ಹಾಡಿದೆ.
ಯಾಕಾಗಿ ಸಾವರ್ಕರ್ ಹೆಸರು?
ಕೆಲ ತಿಂಗಳ ಹಿಂದೆ ಶಿವಮೊಗ್ಗದಲ್ಲಿ ನಡೆದಿದ್ದ ಸಾವರ್ಕರ್ ಮತ್ತು ಟಿಪ್ಪು ಸುಲ್ತಾನ್ ಪೋಸ್ಟರ್ ವಿವಾದ ನಡೆದ ಸಮಯದಲ್ಲಿ ರಾಜ್ಯದೆಲ್ಲೆಡೆ ಟಿಪ್ಪು vs ಸಾವರ್ಕರ್ ಪೋಸ್ಟರ್ ವಾರ್ ನಡೆದಿತ್ತು. ಆದರೆ ಕೃಷ್ಣನಗರಿ ಉಡುಪಿಯಲ್ಲಿ ಮಾತ್ರ ಈ ವಿವಾದ ವಿಕೋಪಕ್ಕೆ ಹೋಗಿತ್ತು. ಉಡುಪಿಯ ಬ್ರಹ್ಮಗಿರಿ ಸರ್ಕಲ್ ನಲ್ಲಿ ಸಾವರ್ಕರ್ ಪ್ರತಿಮೆ ನಿರ್ಮಾಣ ಮಾಡಬೇಕು, ಸಾವರ್ಕರ್ ಸರ್ಕಲ್ ಎಂಬ ಹೆಸರಿಡಬೇಕೆಂದು ಬಿ.ಜೆ.ಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಮತ್ತು ಹಿಂದೂಪರ ಸಂಘಟನೆಗಳು ಆಗ್ರಹಿಸಿದ್ದವು. ಈ ಸಮಯದಲ್ಲಿ ಇದಕ್ಕೆ ಕಾಂಗ್ರೆಸ್ ಪಕ್ಷ ಮಾತ್ರವಲ್ಲದೆ, ಉಡುಪಿ ಶಾಸಕ ರಘಪತಿ ಭಟ್ ನಿಂದಲೂ ವಿರೋಧ ವ್ಯಕ್ತವಾಗಿತ್ತು. ಉಡುಪಿ ಜಿಲ್ಲಾ ಕಾಂಗ್ರೆಸ್ ಇದನ್ನು 'ಆಸ್ಕರ್ ಫರ್ನಾಂಡಿಸ್ ಸರ್ಕಲ್' ಎಂದು ಹೆಸರಿಡಬೇಕು ಎಂದು ವಿರೋಧ ಮಾಡಿದ್ದರೆ , ಉಡುಪಿ ಶಾಸಕ ರಘಪತಿ ಭಟ್ ಮಾತ್ರ ಯಶ್ಪಾಲ್ ನಡುವಿನ ವೈಮನಸ್ಸಿನಿಂದ ವಿರೋಧ ಮಾಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿತ್ತು. "ಈಗಾಗಲೇ ಆಸ್ಕರ್ ಫೆರ್ನಾಂಡಿಸ್ ಹೆಸರು ಇಡೋದಾಗಿ ನಿರ್ಧರಿಸಿದ್ದೇವೆ. ಸಾವರ್ಕರ್ ಹೆಸರು ಬೇರೆ ಯಾವುದಾದರೂ ಸರ್ಕಲ್ ಗೆ ಇಡೋಣ" ಎಂದು ಶಾಸಕರು ಹೇಳಿದ್ದರು.
ಬಿ.ಜೆ.ಪಿ ಮುಖಂಡ ಯಶ್ಪಾಲ್ ಸುವರ್ಣ ಬ್ರಹ್ಮಗಿರಿಯಲ್ಲಿ ಸಾವರ್ಕರ್ ಸರ್ಕಲ್ ಹೆಸರಿಡಬೇಕು ಮತ್ತು ಸಾವರ್ಕರ್ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಉಡುಪಿ ನಗರಸಭೆಗೂ ಮನವಿಯನ್ನೂ ಸಲ್ಲಿಸಿದ್ದರು. ಬ್ರಹ್ಮಗಿರಿಯಲ್ಲಿಯೇ ಸಾವರ್ಕರ್ ಸರ್ಕಲ್ ನಿರ್ಮಾಣ ಆಗಬೇಕೆಂದು ಪಟ್ಟು ಹಿಡಿದಿದ್ದರು.
ಆದರೆ ಸದ್ಯ ಸರಕಾರದಿಂದ ಹೊರಡಿಸಲಾದ ಆದೇಶ ಉಡುಪಿಯ ಯಾವ ಸರ್ಕಲ್ ಗೂ ಸಾವರ್ಕರ್ ಹೆಸರು ಇಲ್ಲದಾಗಿದೆ.
ಬಿ.ಜೆ.ಪಿ ನಾಯಕರ ನಡುವಿನ ವೈಮನಸ್ಸು ಯಾಕೆ...?
ಬಿ.ಜೆ.ಪಿ ಯುವ ನಾಯಕ ಯಶ್ಪಾಲ್ ಮತ್ತು ಶಾಸಕ ರಘಪತಿ ನಡುವಿನ ಕೋಲ್ಡ್ ವಾರ್ ಸಾಕಷ್ಟು ತಿಂಗಳಿನ ಹಿಂದೆಯಿಂದಲೂ ನಡೆಯುತ್ತಿತ್ತು ಎಂಬ ಮಾತು ಇಬ್ಬರು ನಾಯಕರ ಆಪ್ತ ವಲಯದಲ್ಲಿ ಕೇಳಿಬರುತ್ತಿತ್ತು. ಆದರೆ ಸಾವರ್ಕರ್ ಹೆಸರು ಬ್ರಹ್ಮಗಿರಿ ಸರ್ಕಲ್ ಗೆ ಇಡಬೇಕು ಎಂಬ ವಿಚಾರ ಮುನ್ನೆಲೆಗೆ ಬಂದ ಸಮಯದಲ್ಲಿ ಇವರಿಬ್ಬರ ನಡುವಿನ ವೈಮನಸ್ಸು ವಿಚಾರ ಎಲ್ಲರಿಗೂ ಗೊತ್ತಾಗಿತ್ತು. ಆದರೆ ಅವರಿಬ್ಬರ ವೈಮನಸ್ಸು ಯಾವ ಕಾರಣಕ್ಕೆ ಎಂಬುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ.
ಕೈ ನಾಯಕನ ಹೆಸರು; ಯಶ್ಪಾಲ್ ಗೆ ಭಟ್ ಟಾಂಗ್!
ಆದರೆ ಈಗ ಉಡುಪಿ ನಗರಸಭಾ ವ್ಯಾಪ್ತಿಯ ಪ್ರಮುಖ ವೃತ್ತಗಳಿಗೆ ನಾಮಕರಣ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಪುರಸಭೆಗಳ ಅಧಿನಿಯಮ 1964 211ರ ಅನ್ವಯ ನಾಮಕರಣ ಮಾಡಲು ಸರ್ಕಾರ ಅನುಮತಿ ನೀಡಿ ಆದೇಶಿಸಿದೆ. ಉಡುಪಿ ನಗರಸಭಾ ವ್ಯಾಪ್ತಿಯ ಬನ್ನಂಜೆ ಸರ್ಕಲ್ ಗೆ "ನಾರಾಯಣಗುರು ವೃತ್ತ", ಕಲ್ಸಂಕ ವೃತ್ತಕ್ಕೆ "ಮಧ್ವಾಚಾರ್ಯ ವೃತ್ತ", ಡಯಾನಾ ಸರ್ಕಲ್ ಗೆ "ವಾದಿರಾಜ ವೃತ್ತ", ಸಂತೆಕಟ್ಟೆ ಕಲ್ಯಾಣಪುರ ರಸ್ತೆ ಜಂಕ್ಷನ್ ಗೆ "ಕೋಟಿ - ಚೆನ್ನಯ್ಯ ವೃತ್ತ", ಬ್ರಹ್ಮಗಿರಿ ದೊಡ್ಡ ಸರ್ಕಲ್ ಗೆ "ಆಸ್ಕರ್ ಫೆರ್ನಾಂಡಿಸ್ ಸರ್ಕಲ್" ಹಾಗೂ ಪರ್ಕಳದಿಂದ ಕೋಡಂಗೆ ಹಾಗೂ ಕೋಡಂಗೆಯಿಂದ ಸರಳಬೆಟ್ಟುಗೆ ಹಾದುಹೋಗುವ ಮಧ್ಯದಲ್ಲಿರುವ ವೃತ್ತಕ್ಕೆ "ಶ್ರೀರಾಮ ವೃತ್ತ" ಎಂದು ನಾಮಕರಣ ಮಾಡಲು ಆದೇಶಿಸಿದೆ. ಹೀಗೆ ಸರಕಾರದ ಮೂಲಕವೇ ಆದೇಶ ಹೊರಡಿಸಿ ರಘುಪತಿ ಭಟ್ ಯಶ್ಪಾಲ್ ಸುವರ್ಣ ಗೆ ಕೌಂಟರ್ ನೀಡಿದ್ದಾರೆ. ಆದರೆ, ಇದು ಮುಂದಿನ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ಯಾವ ರೀತಿ ಪೆಟ್ಟು ಕೊಡಲಿದೆ ಅನ್ನೋದು ತಿಳಿಯದು.
ಆಸ್ಕರ್ ಹೆಸರಿಗೆ ಕಾಂಗ್ರೆಸ್ ಹರ್ಷ; ಯಶ್ಪಾಲ್ ಬೆಂಬಲಿಗರು ಹೇಳೋದೇನು?
ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ತೆರಳುವ ಬ್ರಹ್ಮಗಿರಿ ಸರ್ಕಲ್ ಗೆ ಆಸ್ಕರ್ ಫೆರ್ನಾಂಡಿಸ್ ನಾಮಕರಣಕ್ಕೆ ಕಾಂಗ್ರೆಸ್ ಹರ್ಷ ವ್ಯಕ್ತಪಡಿಸಿದ್ದರೆ, ಕಟ್ಟಾ ಬಿಜೆಪಿ ಕಾರ್ಯಕರ್ತರು ನಿಗಿ ನಿಗಿ ಕೆಂಡವಾಗಿದ್ದಾರೆ. ಆಸ್ಕರ್ ಫೆರ್ನಾಂಡಿಸ್ ಋಣ ಶಾಸಕರ ಮೇಲೆ ಇದೆ. ಅದಕ್ಕಾಗಿಯೇ ಶಾಸಕರು ಸಾವರ್ಕರ್ ಬದಲು ಆಸ್ಕರ್ ಫೆರ್ನಾಂಡಿಸ್ ಹೆಸರು ಇರಿಸಿದ್ದಾರೆ ಅಂತಾ ಕೆಲವರು ದೂರಿದ್ದಾರೆ.
ಒಟ್ಟಿನಲ್ಲಿ, ಇದರಿಂದ ಉಡುಪಿಯ ಬಿ.ಜೆ.ಪಿ ನಾಯಕರ ನಡುವಿನ ಕೋಲ್ಡ್ ವಾರ್ ನಲ್ಲಿ ಮೊದಲ ಗೆಲುವು ಶಾಸಕ ರಘಪತಿ ಭಟ್ ಪಡೆದಂತಾಗಿದೆ. ಮುಂದೆ ಇದು ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ...