-->
BANGALORE:  ʼಕನ್ನಡತಿ ಉತ್ಸವ-2022ʼ ರ ಅಂಗವಾಗಿ ʼಮಿಸ್‌ ಮಹಾಲಕ್ಷ್ಮೀʼ

BANGALORE: ʼಕನ್ನಡತಿ ಉತ್ಸವ-2022ʼ ರ ಅಂಗವಾಗಿ ʼಮಿಸ್‌ ಮಹಾಲಕ್ಷ್ಮೀʼ



ಬೆಂಗಳೂರು: ʼಅವಳ ಹೆಜ್ಜೆʼ ಸಂಸ್ಥೆಯು ಸತತ 6 ವರ್ಷಗಳಿಂದ ʼಕನ್ನಡತಿ ಉತ್ಸವʼ ವನ್ನು ವಾರ್ಷಿಕ ಹಬ್ಬವಾಗಿ ನಡೆಸಿಕೊಂಡು ಬರುತ್ತಿದೆ. ಪ್ರತಿವರ್ಷವೂ ಒಂದಿಲ್ಲೊಂದು ವಿಶಿಷ್ಟ ಕಾರ್ಯಕ್ರಮದ ಮೂಲಕ ಮಹಿಳೆಯರ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ರಾಜಕೀಯ ಬದುಕಿನ ಮೇಲೆ ಪರಿಣಾಮವನ್ನು ಬೀರುವಂತ ವಸ್ತುವಿಷಯಗಳ ಮೇಲೆ ಕವಿತೆ, ನಾಟಕ, ಸಿನಿಮಾ, ಚರ್ಚಾಗೋಷ್ಠಿಗಳನ್ನು ಏರ್ಪಡಿಸಿ ತನ್ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಮಹಿಳಾ ಆಶಯಗಳಿಗೆ ದನಿಯಾಗುತ್ತಾ ಬಂದಿದೆ. 

ಇದೀಗ 2022ರ ʼಕನ್ನಡತಿ ಉತ್ಸವʼವು ಅತ್ಯಂತ ವಿಭಿನ್ನವೂ ವಿನೂತನವೂ ಆಗಿರಲಿದೆ. ನಮ್ಮ ಸಮಾಜದಲ್ಲಿ ಅನೇಕ ಮಹಿಳೆಯರು ಕುಟುಂಬದ ಕಣ್ಣಾಗಿ ಮನೆಯ ಪ್ರತಿಯೊಬ್ಬ ಸದಸ್ಯರ ಆರೋಗ್ಯ, ಶಿಕ್ಷಣ, ವೃತ್ತಿಯನ್ನು ಪೋಷಿಸುತ್ತಾ ಎಲ್ಲರ ಹಿತದೊಳಗೆ ತಮ್ಮ ಸುಖ ಕಾಣುತ್ತಾರೆ. ಇನ್ನೂ ಅನೇಕ ಮಹಿಳೆಯರು ತಮ್ಮ ವೃತ್ತಿ ಹಾಗೂ ಕುಟುಂಬವನ್ನು ಸರಿದೂಗಿಸಿಕೊಂಡು ಹೋಗಲು ಸದಾ ಕಾಲ ಹೋರಾಡುತ್ತಿರುತ್ತಾರೆ. ಇವುಗಳ ಮಧ್ಯೆ ತಮ್ಮ ಕನಸು ಏನು? ತಮ್ಮ ಆಸಕ್ತಿ ಏನು? ತಮ್ಮೊಳಗಿನ ಕಲೆ ಏನು? ಪ್ರವೃತ್ತಿಯೇ ವೃತ್ತಿಯೂ ಆಗಬಹುದೇ? ದಿನನಿತ್ಯದ ಜಂಜಾಟಗಳ ನಡುವೆ ತಮ್ಮ ವೈಯಕ್ತಿಕ ಖುಷಿಗಾಗಿ ಕೆಲವು ಗಂಟೆ ಅಥವಾ ನಿಮಿಷಗಳನ್ನಾದರೂ ತೆಗೆದಿಡಬಹುದೇ? ಇಂತಹ ಹಲವು ಒಳನೋಟಗಳನ್ನು ಕೆದಕುವ ಒಂದು ಪ್ರಯತ್ನವೇ ಈ ʼಮಿಸ್‌ ಮಹಾಲಕ್ಷ್ಮೀʼ ರ್‍ಯಾಂಪ್ ವಾಕ್!


ಕಾರ್ಯಕ್ರಮದ ವಿವರ ಹೀಗಿದೆ:

• PASSION SHOW – ಇದು ಫ್ಯಾಷನ್‌ ಶೋ ಅಲ್ಲ, ಪ್ಯಾಷನ್‌ ಶೋ!

ಈ ವಿಭಾಗದಲ್ಲಿ ಭಾಗವಹಿಸಲು ಮಹಿಳೆಯರು ಮತ್ತು ಹೆಣ್ಣುಮಕ್ಕಳು ತಮ್ಮ ವೈಯಕ್ತಿಕ ಕನಸು, ಕಸುಬು ಮತ್ತು ಕಲೆಯನ್ನು ಉಡುಗೆ-ತೊಡುಗೆ, ವೇಷಭೂಷಣಗಳ ಮೂಲಕ ವೇದಿಕೆ ಮೇಲೆ ಪ್ರದರ್ಶಿಸಲಿದ್ದಾರೆ. ಕಾರ್ಯಕ್ರಮಕ್ಕೆ ಈಗಾಗಲೇ 7 ವರ್ಷದ ಮಗುವಿನಿಂದ 70 ವರ್ಷದ ಹಿರಿಯರವರೆಗೆ ಅನೇಕ ಮಹಿಳೆಯರು ನೊಂದಾಯಿಸಿಕೊಂಡಿದ್ದು, ವೈದ್ಯಕೀಯ, ವಕೀಲಿ, ಫಾರ್ಮಾಸಿ, ಕೇಶ ವಿನ್ಯಾಸ, ಬಾಹ್ಯಾಕಾಶ ವಿಜ್ಞಾನ, ವನ್ಯಜೀವಿ ಛಾಯಾಗ್ರಾಹಣ, ಸಮಾಜ ಸೇವೆ, ಕಸೂತಿ, ಶಿಕ್ಷಣ, ಫ್ಯಾಷನ್‌ ಡಿಸೈನ್, ಮಾಡಲಿಂಗ್, ಜಿಮ್‌, ಯೋಗ, ಸಾಹಿತ್ಯ, ಗಾಯನ, ಭರತನಾಟ್ಯ, ಕಥಕ್‌, ಯಕ್ಷಗಾನ, ಚಿತ್ರಕಲೆ, ನಾಟಕ, ಆಭರಣ ವಿನ್ಯಾಸ, ಆಪ್ತ ಸಮಾಲೋಚನೆ ಮುಂತಾದ ಕ್ಷೇತ್ರಗಳನ್ನು ಪ್ರತಿನಿಧಿಸಲಿದ್ದಾರೆ.

• ʼಹಳೆ ಬೇರು, ಹೊಸ ಚಿಗುರು – ಇದು ತಲೆಮಾರುಗಳ ಬಾಂಧವ್ಯದ ನಡಿಗೆ

ಈ ವಿಭಾಗದಲ್ಲಿ ಭಾಗವಹಿಸಲು ಅಜ್ಜಿ, ತಾಯಿ, ಮಗಳು, ಮೊಮ್ಮಗಳು ಹೀಗೆ ಹೆಣ್ಣು ತಲೆಮಾರು ಒಟ್ಟಿಗೆ ಒಂದು ತಂಡವಾಗಿ ವೇದಿಕೆ ಮೇಲೆ ಹೆಜ್ಜೆ ಹಾಕಲಿದ್ದಾರೆ. ಇವರುಗಳು ತಮ್ಮ ಬಾಂಧವ್ಯವನ್ನು ಒಂದು ವಿಶೇಷ ಥೀಮ್‌ ಮೂಲಕ ಪ್ರದರ್ಶಿಸಲು ನೊಂದಣಿ ಮಾಡಿಸಿದ್ದಾರೆ.

ಈ ಕಾರ್ಯಕ್ರಮವು ನವೆಂಬರ್‌ 13ರಂದು ಭಾನುವಾರ ಬೆಳಿಗ್ಗೆ 10.30ರಿಂದ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಗೆಳೆಯರ ಬಳಗದಲ್ಲಿರುವ ಡಾ. ರಾಜ್‌ ಕುಮಾರ್‌ ಒಳಾಂಗಣ ಕ್ರೀಡಾಂಗಣ ದಲ್ಲಿ ನಡೆಯಲಿದೆ. 

ಈ ಬಾರಿಯ ಕನ್ನಡತಿ ಉತ್ಸವವು ʼಮಿಸ್.ಮಹಾಲಕ್ಷ್ಮೀʼ ಹೆಸರಿನೊಂದಿಗೆ ಅತ್ಯಂತ ವಿಭಿನ್ನವೂ, ವಿನೂತನವೂ ಆಗಿರಲಿದ್ದು ಮಹಿಳೆಯರು, ಮಹಿಳಾ ಸಂಘಗಳು, ಶಾಲಾ-ಕಾಲೇಜುಗಳು, ಕ್ರೀಡಾ ಅಕಾಡೆಮಿಗಳು, ಸಾಂಸ್ಕೃತಿಕ ಸಂಘಗಳು ಅತ್ಯಂತ ಉತ್ಸುಕತೆಯಿಂದ ʼಅವಳ ಹೆಜ್ಜೆʼಯ ಜೊತೆ ಹೆಜ್ಜೆ ಹಾಕಲಿವೆ.

Ads on article

Advertise in articles 1

advertising articles 2

Advertise under the article