
ಮುಸ್ಲಿಮರಿಂದ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ: ಕಲ್ಲಡ್ಕ ಭಟ್ ವಿವಾದ
ಚಿಕ್ಕಬಳ್ಳಾಪುರ: ದೇಶದಲ್ಲಿ ಕುಟುಂಬ ನಿಯಂತ್ರಣ ಯೋಜನೆಯನ್ನು ಹಿಂದೂಗಳು ಮಾತ್ರ ನಿರ್ವಹಣೆ ಮಾಡುತ್ತಿದ್ದಾರೆ. ಮುಸ್ಲಿಮರು ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಆರೋಪ ಮಾಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಎಡಪಂಥೀಯರ ವಿರುದ್ಧವೂ ಹರಿಹಾಯ್ದ ಅವರು, ಎಡಪಂಥೀಯರು ದೇಶದಲ್ಲಿ ವಿಕೃತಿ ಮೆರೆಯುವ ಕೆಲಸ ಮಾಡ್ತಾ ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ವಾಗ್ದಾಳಿ ನಡೆಸಿದರು. ನಟರಾದ ಚೇತನ್, ಕಮಲ್ ಹಾಸನ್ ವಿರುದ್ಧ ಕಿಡಿಕಾರಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ ವಿಕೃತಿ ಪ್ರಚಾರ ಮಾಡುತ್ತಿದ್ದಾರೆ. ಮುಸ್ಲಿಮರು ಪಾಕಿಸ್ತಾನದ ಬಗ್ಗೆ ಯೋಚನೆ ಮಾಡುತ್ತಾರೆ. ಈಗ ಸಾಮಾನ್ಯ ಮುಸ್ಲಿಮರಲ್ಲಿ ಅಂತಹ ಮಾನಸಿಕತೆ ಬೆಳೆಯುತ್ತಿದೆ ಎಂದರು. ಆದರೆ, ಮುಸ್ಲಿಮರಲ್ಲಿಯೂ ದೇಶ ಭಕ್ತ ಅಧಿಕಾರಿಗಳು, ನ್ಯಾಯವಾದಿಗಳು ಇದ್ದಾರೆ ಎಂದು ಹೇಳಿದರು.
ಹಿಜಾಬ್ ಸಂಬಂಧ ಮಾತನಾಡಿದ ಭಟ್, ಹಿಜಾಬ್ ಧರಿಸಿ ಶಾಲೆಗೆ ಬಂದರೆ ಅದು ಶಾಲೆಯನ್ನು ಎರಡು ವಿಭಾಗ ಮಾಡಿದಂತೆ. ಶಾಲಾ ಮಕ್ಕಳು ಶಾಲೆಯ ನೀತಿ ಮತ್ತು ನಿಯಮಗಳ ಪಾಲನೆ ಮಾಡಬೇಕು. ಆದರೆ ಬೆಳೆಯುವ ಮಕ್ಕಳಲ್ಲಿ ವಿಷ ಬಿಜ ಬಿತ್ತುವ ಕೆಲಸ ಮಾಡಲಾಗ್ತಿದೆ. ಈಗ ಹಿಜಾಬ್ ಬೇಕು ಎನ್ನುವವರು ಮುಂದೆ ಪ್ರತ್ಯೇಕ ತರಗತಿಯ ಬಗ್ಗೆ ಬೇಡಿಕೆ ಇಡುತ್ತಾರೆ ಎಂದು ದೂರಿದರು.