
MANGALORE: ನ.19 ಕ್ಕೆ ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪುತ್ಥಳಿ ಲೋಕಾರ್ಪಣೆ...!!!
ಅದು ಕ್ರಿ.ಶ. 1834ರ ಸಮಯ..ಬ್ರಿಟೀಷರು ಮೋಸದಿಂದ ಕೊಡಗು ಮತ್ತು ತುಳುನಾಡನ್ನ ಸ್ವಾಧೀನಕ್ಕೆ ಪಡೆದು ಜನಸಾಮಾನ್ಯರನ್ನ ಅಲ್ಲೋಲ ಕಲ್ಲೋಲ ಮಾಡಿದ ದಿನವದು.. ರಾಜವಂಶಸ್ಥರ ಅಧಿಕಾರದಲ್ಲಿ ಜನಸಾಮಾನ್ಯರು ನೆಮ್ಮದಿಯ ಬದುಕು ನಡೆಸ್ತಾ ಇದ್ದಾಗ ಎಂಟ್ರಿ ಕೊಟ್ಟ ಬ್ರಿಟೀಷರು ಜನರ ನೆಮ್ಮದಿಯನ್ನೇ ಕಸಿದರು. ಬ್ರಿಟೀಷರ ಉಪಟಲಕ್ಕೆ ಸುಸ್ತಾಗಿ ಜನ ಸಾಮಾನ್ಯರ ಬದುಕೇ ಮೂರಾಬಿಟ್ಟಾಗಿ ಹೋಗಿತ್ತು. ಇವೆಲ್ಲವನ್ನ ಹತ್ತಿರದಿಂದ ಕಂಡ ಕೆಚ್ಚೆದೆಯ ವೀರ ಕೆದಂಬಾಡಿ ರಾಮಯ್ಯಗೌಡರು ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ತೊಡೆ ತಟ್ಟಿಯೇ ನಿಂತ್ರು...ಅಲ್ಲಿಂದ ಶುರುವಾಯಿತು ನೋಡಿ ಕೆದಂಬಾಡಿ ರಾಮಯ್ಯಗೌಡರ ಬ್ರಿಟಿಷರ ವಿರುದ್ಧದ ರಣಕಹಳೆ....
ಹೌದು ಇದೆಲ್ಲ ನಾವ್ ಯಾಕೆ ಹೇಳ್ತಿದ್ದೀವಿ ಅಂದ್ರೆ ತುಳುನಾಡಿನ ಅಪ್ಪಟ ಸ್ವಾತಂತ್ರ‍್ಯ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆ ಇದೀಗ ಮಂಗಳೂರಿನ ಬಾವುಟಗುಡ್ಡೆಯಲ್ಲಿ ತಲೆಯೆತ್ತಿ ನಿರ್ಮಾಣಗೊಂಡಿದ್ದು, ಅದರ ಲೋಕಾರ್ಪಣೆಗೆ ಸಿಧ್ಧತೆಗಳು ನಡೀತಾ ಇವೆ. ಅಪ್ಪಟ ತುಳುನಾಡಿನ ಸ್ವಾತಂತ್ರ‍್ಯ ಹೋರಾಟಗಾರ ಅಂದಿನ ಬ್ರಿಟೀಷರ ದಬ್ಬಾಳಿಕೆಯ ಕಾಲದಲ್ಲಿ ಜನಸಾಮಾನ್ಯರ ಒಲಿತಿಗಾಗಿ ಬ್ರಿಟೀಷರನ್ನೇ ಸದೆಬಡಿದು ಜಾತಿ ಮತ ಧರ್ಮ ಎಲ್ಲವೂ ಒಂದೇ ನಾವೆಲ್ಲರೂ ಒಂದೇ ಎಂದು ಜಗತ್ತಿಗೆ ತಿಳಿಸಿದವರು. ಅಷ್ಟೇ ಅಲ್ಲ ಬ್ರಿಟೀಷರನ್ನ ಹೊಡೆದೋಡಿಸಿ ಮಂಗಳೂರಿನ ಬಾವುಟಗುಡ್ಡೆಯಲ್ಲಿ 13 ದಿನಗಳ ಕಾಲ ಭಾವುಟ ಹಾರಿಸಿ ತುಳುನಾಡಿನ ಜನತೆಗೆ ಸ್ವಾತಂತ್ರ‍್ಯ ಸಿಗುವಂತೆ ಮಾಡಿದ ಚಾರಿತ್ರಿಕ ಹಿನ್ನೆಲೆ ಅವರಿಗಿದೆ. ಹಾಗಾಗಿ ಅವರ ನೆನಪು ಶಾಶ್ವತವಾಗಿಸುವ ನಿಟ್ಟಿನಲ್ಲಿ ನ.19ರಂದು ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪುತ್ಥಳಿ ಬಾವುಟಗುಡ್ಡೆಯಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಇನ್ನು ನ.19ರಂದು ನಡೆಯುವ ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪುತ್ಥಳಿಯ ಲೋಕಾರ್ಪಣೆಗೆ ಕರಾವಳಿ, ಕೊಡಗು ಭಾಗದ ಜನತೆ ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿಲಿದ್ದಾರೆ.
ಸ್ವಾತಂತ್ರ‍್ಯ ಹೋರಾಟಗಾರ, ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಉಸ್ತುವಾರಿ ಸಮಿತಿಯ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಉಡುಪಿ, ಬೆಂಗಳೂರು, ಮೈಸೂರು, ಕೊಡಗು, ಮಂಗಳೂರಿಗೆ ಉಸ್ತುವಾರಿಗಳನ್ನ ನೇಮಕ ಮಾಡಲಾಗಿದೆ. ಈ ಮೂಲಕ ಕಾರ್ಯಕ್ರಮದ ಅಂದವನ್ನ ಹೆಚ್ಚಿಸಲು ಎಲ್ಲರು ಜಾತಿ ಭೇದ ಮತ ಬಿಟ್ಟು ಒಂದಾಗಿದ್ದಾರೆ.
ಇನ್ನು ಕಂಚಿನ ಪುತ್ಥಳಿಯನ್ನ ನ.19ರಂದು ಬೆಳಿಗ್ಗೆ 10ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಲಿದ್ದಾರೆ. ಇವರಿಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸ್ವಾಮೀಜಿ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಸಾಥ್ ನೀಡಲಿದ್ದಾರೆ. ಜೊತೆಗೆ ಕರಾವಳಿಯ ಶಾಸಕರು, ಬಿಜೆಪಿ-ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ.
ಒಟ್ಟಿನಲ್ಲಿ ಸ್ವಾತಂತ್ರ‍್ಯ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮ ಇಡೀ ಮಂಗಳೂರಿನ ಮೆರುಗನ್ನ ಮತ್ತಷ್ಟು ಹೆಚ್ಚಿಸಲಿದೆ...