
'ಕಾಂತಾರ ಕಮೆಂಟ್'; ನಟ ಚೇತನ್ ವಿರುದ್ಧ ಶಾಸಕ ಉಮಾನಾಥ ಕೋಟ್ಯಾನ್ ಕಿಡಿ!
ಮಂಗಳೂರು: ಕಾಂತಾರ ಸಿನೆಮಾ ಕುರಿತಂತೆ ನಟ ಚೇತನ್ ಅಹಿಂಸಾ "ದೈವಾರಾಧನೆ ಹಿಂದೂ ಸಂಸ್ಕೃತಿ ಅಲ್ಲ" ಎಂದು ನೀಡಿರುವ ಹೇಳಿಕೆಗೆ ಮುಲ್ಕಿ-ಮೂಡಬಿದ್ರಿ ಶಾಸಕ ಉಮಾನಾಥ ಕೋಟ್ಯಾನ್ ನಟ ಚೇತನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಚೇತನ್ ಕುರಿತು "ಮಾನಸಿಕ ಅಸ್ವಸ್ಥ" ಎಂದು ಕರೆದಿರುವ ಉಮಾನಾಥ ಕೋಟ್ಯಾನ್, ನಟ ಚೇತನ್ ಹಿಂದೂ ಎಂಬುವುದೇ ನನಗೆ ಸಂಶಯ. ಅವರನ್ನೊಮ್ಮೆ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿ ಚಿಕಿತ್ಸೆ ನೀಡಬೇಕಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
"ದೈವಾರಾಧನೆ ತುಳುನಾಡಿನ ಭಾಗವಾಗಿದ್ದು, ತುಳುನಾಡಿನಲ್ಲಿ ದೈವಾರಾಧನೆ, ನಾಗಾರಾಧನೆ ಅತ್ಯಂತ ಪವಿತ್ರ ಮತ್ತು ಶ್ರೇಷ್ಠವಾಗಿದೆ. ಎಡಪಂಥೀಯರು ಕೂಡ ತಮಗೆ ಸಂಕಟ ಬಂದಾಗ ದೈವಗಳು ಮತ್ತು ನಾಗದೇವರ ಮೊರೆ ಹೋಗುವುದನ್ನು ನಾವು ಕಂಡಿದ್ದೇವೆ. ದೈವದ ಕೊಡಿಯಡಿಯಲ್ಲಿ ಎಲ್ಲರೂ ಸಮಾನರು. ಕಾಂತಾರ ಅಂತಹ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರವಾಗಿದೆ. ಇಂತಹ ಚಿತ್ರದ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುವುದು ಸರಿಯಲ್ಲ. ಅವರ ಈ ಹೇಳಿಕೆಗಳಿಗೆ ನನ್ನ ಧಿಕ್ಕಾರವಿದೆ" ಎಂದು ಫೇಸ್ಬುಕ್ ಪೋಸ್ಟ್ ನಲ್ಲೂ ತಿಳಿಸಿದ್ದಾರೆ.