ಬೆಂಗಳೂರು: ಚಿತ್ರರಂಗದ ಸಮಸ್ಯೆ ಕುರಿತು ಸಚಿವರ ಜೊತೆ ಪ್ರಮುಖರ ಚರ್ಚೆ
Thursday, October 13, 2022
ಬೆಂಗಳೂರು: ಪ್ರಸ್ತುತ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ಸಚಿವ ಸಂಪುಟದ ಸದಸ್ಯರ ಜೊತೆ ಚಿತ್ರರಂಗದ ಹಿರಿಯರು ಸುದೀರ್ಘ ಮಾತುಕತೆ ನಡೆಸಿದರು.
ಚಲನ ಚಿತ್ರ ನಿರ್ದೇಶಕರು, ನಿರ್ಮಾಪಕರು, ವಿತರಕರು ಹಾಗೂ ಕಲಾವಿದರ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸರ್ಕಾರದ ಪರ ಹಾಜರಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ಕಾನೂನು ಸಚಿವ ಮಾಧುಸ್ವಾಮಿ, ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಚಿತ್ರರಂಗದ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.
ಸರಕಾರವು ಈ ಹಿಂದೆ ಜನತಾ ಚಿತ್ರಮಂದಿರಗಳನ್ನು ಸ್ಥಾಪಿಸಲು 50 ಲಕ್ಷ ರೂಪಾಯಿಗಳ ಅನುದಾನ ಘೋಷಣೆ ಮಾಡಿದ್ದರೂ, ಯೋಜನೆ ಜಾರಿ ಆಗಿಲ್ಲ. ಆ್ಯಪ್ ಮೂಲಕ ಟಿಕೆಟ್ ಮಾರಾಟ ಆಗುತ್ತಿರುವುದರಿಂದ ಅನುಭವಿಸುತ್ತಿರುವ ತೊಂದರೆಗಳು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಚಿತ್ರ ರಂಗದ ಪ್ರಮುಖರಾದ ರಾಜೇಂದ್ರ ಸಿಂಗ್ ಬಾಬು, ನಾಗಭರಣ, ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಇತರ ಗಣ್ಯರೂ ನಿಯೋಗದಲ್ಲಿದ್ದರು.