-->
PUTTUR: ಸರ್ಕಾರಿ ಬಾವಿಯನ್ನೇ ನುಂಗಿದ ಬೃಹತ್ ಕಟ್ಟಡ!!

PUTTUR: ಸರ್ಕಾರಿ ಬಾವಿಯನ್ನೇ ನುಂಗಿದ ಬೃಹತ್ ಕಟ್ಟಡ!!


ಪುತ್ತೂರು:
ಪುತ್ತೂರಿನ ಕೇಂದ್ರ ಭಾಗದಲ್ಲಿದ್ದ ಸರ್ಕಾರಿ ಬಾವಿಯೊಂದು ಇದ್ದಕ್ಕಿದ್ದಂತೆ ಕಾಣೆಯಾಗಿದೆ. ಸುಮಾರು 800 ವರ್ಷಗಳ ಹಿಂದೆಯೇ ಇದ್ದ ಆಯಾತಾಕಾರದ ಕಲ್ಲುಘಟನೆಯೂ ಇದರೊಂದಿಗೆ ಮಣ್ಣು ಸೇರಿದೆ. ಬೃಹತ್ ಕಟ್ಟಡವೊಂದರ ನಿರ್ಮಾಣದಲ್ಲಿ ಈ ಎರಡೂ ಸರ್ಕಾರಿ ವ್ಯವಸ್ಥೆಗಳು ನೆಲಸಮಗೊಂಡಿದೆ. ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ ಸಂದರ್ಭ ಬೇಕಾಗುವ ನೀರನ್ನು ಒದಗಿಸುತ್ತಿದ್ದ ಈ ಸರ್ಕಾರಿ ಬಾವಿ ಪ್ರಸ್ತುತ ಅತಿಕ್ರಮಣಗೊಂಡಿದೆ. ವಿಶೇಷವೆಂದರೆ ಕಾನೂನು ಪಾಲನೆ ಮಾಡಬೇಕಾಗಿದ್ದ ವಕೀಲರೇ ಈ ಅತಿಕ್ರಮಣ ಮಾಡಿದ್ದಾರೆ ಎಂದು ಸಂತೋಷ್ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.

ಪುತ್ತೂರು ಹೋಬಳಿಯ ಸರ್ವೆ ನಂಬರ್ 133/9ಎ0.02 ರಲ್ಲಿ ಇದ್ದ ಈ ಸರ್ಕಾರಿ ಬಾವಿ ಹಾಗೂ ಪಕ್ಕದಲ್ಲಿದ್ದ ಸುಂದರವಾದ ಕಲ್ಲುಘಟನೆ ಮತ್ತು ಸುಮಾರು 15 ಅಡಿ ಎತ್ತರದ ಕಲ್ಲಿನ ತಡೆಗೋಡೆ ಅತಿಕ್ರಮಣವಾಗಿರುವ ಜಾಗ. ಇದರ ಪಕ್ಕದಲ್ಲಿದ್ದ ಸರ್ವೆ ನಂಬರ್ 133/9ಬಿ 0.06 ಎಕರೆ ಸ್ಥಳವನ್ನು ಪುತ್ತೂರಿನ ವಕೀಲರೊಬ್ಬರು ಖರೀದಿ ಮಾಡಿ ಅಲ್ಲಿ 5500 ಚದರ ಅಡಿಯ ಕಟ್ಟಡ ನಿರ್ಮಿಸಿದ್ದಾರೆ. ಈ ಸರ್ಕಾರಿ ಬಾವಿ ಒಂದು ಕಾಲದಲ್ಲಿ ಸ್ಥಳೀಯ ದೇವಿ ಆರಾಧನೆಗೆ ನೀರು ಒದಗಿಸುವ ತಾಣವಾಗಿತ್ತು. ಸ್ಥಳೀಯ ನಿವಾಸಿಗಳಿಗೆ ಗೃಹ ಉಪಯೋಗ ಹಾಗೂ ದನಕರುಗಳ ಪಾಲಿಗೂ ನೀರು ನೀಡುವ ಬಾವಿಯಾಗಿತ್ತು. ಆದರೆ ಪ್ರಸ್ತುತ ಈ ಸರ್ಕಾರಿ ಸ್ಥಳವನ್ನು ಕಟ್ಟಡ ನಿರ್ಮಿಸುವ ಸಂದರ್ಭ ಮಣ್ಣು ಹಾಕಿ ಮುಚ್ಚಿ ನಾಮಾವಶೇಷಗೊಳಿಸಲಾಗಿದೆ. ಈ ಸರ್ಕಾರಿ ಬಾವಿ ಇದ್ದ ಸ್ಥಳವನ್ನು ಕಟ್ಟಡದ ಪಾರ್ಕಿಂಗ್ ವ್ಯವಸ್ಥೆಗೆ ಬಳಿಸುವ ಹುನ್ನಾರ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.



ನಗರಸಭೆಯಿಂದ 5500 ಚದರ ಅಡಿ ಕಟ್ಟಡ ನಿರ್ಮಾಣದ ಪರವಾನಿಗೆಯನ್ನು ಪಡೆದುಕೊಂಡಿರುವ ವಕೀಲರು ಪ್ರಸ್ತುತ 10 ಸಾವಿರ ಚದರ ಅಡಿ ಕಟ್ಟಡ ಬಾಡಿಗೆಗೆ ಇದೆ ಎಂಬ ಜಾಹೀರಾತು ನೀಡಿದ್ದಾರೆ. ಜತೆಗೆ ಸೆಟ್ ಬ್ಯಾಕ್ ಇಲ್ಲದೆ ಕಟ್ಟಡ ನಿರ್ಮಾಣಗೊಂಡಿದೆ. ಅನುಮತಿ ಪಡೆಯದೆ 10ಸಾವಿರ ಚದರ ಅಡಿಯ ಕಟ್ಟಡ ಇದೆ ಎಂದು ಜಾಹೀರಾತು ನೀಡುವ ಇವರು ಮುಂದೆ ಇನ್ನಷ್ಟು ಸಾವಿರ ಚದರ ಅಡಿ ಕಟ್ಟಡ ಇದೆ ಎಂದು ಬಾಡಿಗೆದಾರರನ್ನು ನಂಬಿಸುವ ಸಾಧ್ಯತೆಯೂ ಇದೆ. ಈ ನಿಟ್ಟಿನಲ್ಲಿ ಬಾಡಿಗೆದಾರರಿಗೆ ಮತ್ತೆ ಸಂಕಷ್ಟ ಉಂಟಾಗಬಾರದು. ಹಾಗಾಗಿ ಸೆಟ್ ಬ್ಯಾಕ್ ಇಲ್ಲದ ಈ ಕಟ್ಟಡ, ಸರ್ಕಾರಿ ಬಾವಿಯನ್ನು ಒತ್ತುವರಿ ಮಾಡಿದ ಪ್ರಕರಣದ ವಿರುದ್ಧ ಈಗಾಗಲೇ ಸಹಾಯಕ ಆಯುಕ್ತರಿಗೆ, ತಹಶೀಲ್ದಾರ್, ನಗರಸಭೆಯ ಪೌರಾಯುಕ್ತರಿಗೆ ಹಾಗೂ ನಗರಯೋಜನೆ ಪ್ರಾಧಿಕಾರಕ್ಕೆ ಸಾರ್ವಜನಿಕ ಹಿತಾಸಕ್ತಿಯಿಂದ ದೂರು ನೀಡಲಾಗಿದೆ.

ಸರ್ಕಾರಿ ಬಾವಿ ನಗರಸಭೆ ಮೌನ..

ಸರ್ಕಾರಿ ಕೆರೆ ನಗರಸಭೆಯ ಆಸ್ತಿ. ಕಟ್ಟಡ ನಿರ್ಮಾಣದ ಸಂದರ್ಭ ಈ ಕೆರೆಯನ್ನು ಮುಚ್ಚಲಾಗಿದ್ದರೂ ಈ ಬಗ್ಗೆ ನಗರಸಭೆಯ ವತಿಯಿಂದ ಯಾವುದೇ ಕಾನೂನುಪ್ರಕ್ರಿಯೆ ನಡೆದಿಲ್ಲ. ಪಾರವಾನಿಗೆ ಪಡೆದುಕೊಂಡದ್ದಕ್ಕಿಂತ ಹೆಚ್ಚು ಚದರ ಅಡಿ ಕಟ್ಟಡವಿದೆ ಎಂಬ ಪ್ರಚಾರ ಮತ್ತು ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡುವುದೂ ಕಾನೂನುಪ್ರಕಾರ ಅಪರಾಧ. ಸೆಟ್ ಬ್ಯಾಕ್ ಇಲ್ಲದೆ ಕಟ್ಟಡ ನಿರ್ಮಿಸುವುದು ನಿಯಮಬಾಹಿರ. ಹೀಗಿದ್ದರೂ ನಗರಸಭೆ ಮೌನವಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಪುತ್ತೂರು ಪುಡಾಕ್ಕೆ ಈ ದೂರು ಕಳೆದ 2 ವಾರಗಳ ಹಿಂದೆಯೇ ಬಂದಿದೆ. ಆದರೆ ಯಾವುದೇ ಕ್ರಮಕೈಗೊಳ್ಳಲು ನಗರಸಭಾ ಯೋಜನಾ ಪ್ರಾಧಿಕಾರಕ್ಕೆ ಅವಕಾಶ ಇಲ್ಲದ ಹಿನ್ನಲೆಯಲ್ಲಿ ಅದನ್ನು ನಗರಸಭೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಸರ್ವೆ ಇಲಾಖೆ ಕಿತಾಪತಿ

ನಗರಸಭೆಗೆ ದೂರು ಬಂದ ಹಿನ್ನಲೆಯಲ್ಲಿ  133/9A 0.02 ಮತ್ತು 133/9B 0.06 ಜಾಗದ ಗಡಿ ಗುರುತು ಮಾಡಿಕೊಡುವಂತೆ ಸರ್ವೆ ಇಲಾಖೆಗೆ ಮನವಿ ಮಾಡಲಾಗಿತ್ತು. ಆದರೆ ಸರ್ವೆ ಇಲಾಖೆ 133/9Bಯಲ್ಲಿ ಖಾಸಗಿ ಆಸ್ತಿ ಎಂದಷ್ಟೇ ನಮೂದಿಸಿ ಉತ್ತರ ನೀಡಿದೆ. ಸರ್ಕಾರಿ ಬಾವಿಗೆ ಸಂಬಂಧಿಸಿ ಕೇಳಿರುವ ಮಾಹಿತಿಯನ್ನು ಮುಚ್ಚಿಹಾಕಿದೆ. ಎರಡೂ ವಿಚಾರಗಳಿಗೆ ಸಂಬಂಧಿಸಿ ಮಾಹಿತಿ ಕೇಳಿದ್ದರೂ ಕೇವಲ ಗಡಿಗುರುತು ಮಾಡಿಕೊಡುವುದನ್ನು ಬಿಟ್ಟು ಅದು ಖಾಸಗಿ ಆಸ್ತಿ ಎಂದು ಉತ್ತರಿಸುವ ಮೂಲಕ ಸರ್ವೆ ಇಲಾಖೆ ತನ್ನ ಕಿತಾಪತಿ ತೋರಿಸಿದೆ.


ಈಗಾಗಲೇ ಸರ್ವೆ ಇಲಾಖೆಗೆ ಒಂದು ಬಾರಿ ಮನವಿ ಮಾಡಲಾಗಿದೆ. ಆದರೆ ಅವರು ಕೊಟ್ಟ ಉತ್ತರ ಸಮರ್ಪಕವಾಗಿಲ್ಲ. ಹಾಗಾಗಿ ಮತ್ತೊಂದು ಬಾರಿ ಮನವಿ ಮಾಡಲಾಗುವುದು. ಸರ್ಕಾರಿ ಬಾವಿ ಕುರಿತು  ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.

- ವಿದ್ಯಾ ಕಾಳೆ ನಗರಸಭಾ ಪೌರಾಯುಕ್ತೆ.

Ads on article

Advertise in articles 1

advertising articles 2

Advertise under the article