PUTTUR: ಅನಾರೋಗ್ಯಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ; ಮಾನವೀಯ ಮರೆತ ಪ್ರತಿಷ್ಠಿತ ಕುಟುಂಬ
ಪುತ್ತೂರು: ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಯುವತಿಯ ದಹನ ಕಾರ್ಯವನ್ನು ಕುಟುಂಬಸ್ಥರ ಬದಲು ಸ್ಥಳೀಯರೇ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಕೊಯ್ಯೂರು ಪೊಯ್ಯಲೆ ಎಂಬಲ್ಲಿ ಆತ್ಮಹತ್ಯೆ ಮಾಡಿಕೊಂಡ ನೀತಾ ಎಂಬಾಕೆ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ ಯುವತಿ. ಆಕೆಯ ತಂದೆ ಈ ಕುಟುಂಬದಿಂದ ದೂರವಾಗಿದ್ದರು. ಇದನ್ನೇ ನೆಪವಾಗಿಸಿಕೊಂಡು ಈ ಶ್ರೀಮಂತ ಕುಟುಂಬ ಆಕೆಯ ಅಂತಿಮ ದರ್ಶನಕ್ಕೂ ಬರಲಿಲ್ಲ. ಆಕೆಯ ದಹನಕಾರ್ಯಕ್ಕೂ ಬರದೆ ದೂರ ಉಳಿದು `ಪಿಲಿಗೊಬ್ಬು' ಆಡಿರುವುದು ಅಮಾನವೀಯತೆಯ ಪ್ರತಿಬಿಂಬವಾಗಿ ನಿಂತಿದೆ.
ತಂದೆ ದೂರವಾದರೂ ತಾಯಿ ನೆರವಿನಿಂದ ಸಿಎ ಮಾಡಿಕೊಂಡು ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ನೀತಾ 2016 ರ ಬಳಿಕ ತಲೆ ನೋವು ಬೆನ್ನುಹುರಿ ನೋವಿಗೆ ಈಡಾಗಿದ್ದರು. ಈ ನರ ಸಮಸ್ಯೆಯಿಂದ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದರು. ಮಾನಸಿಕವಾಗಿ ನೊಂದ ಈ ಜೀವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವುದು ಒಂದೆಡೆಯಾದರೆ, ಬೇಕಾದಷ್ಟು ಆಸ್ತಿ-ಸಂಪತ್ತು ಇದ್ದರೂ ಬಡ ಕುಟುಂಬದ ಈಕೆಯ ಪಾಲಿಗೆ ಯಾರೂ ಆಶ್ರಯವಾಗಿ ಬರಲಿಲ್ಲ. ಕನಿಷ್ಟ ಈಕೆಯ ಕಷ್ಟ ಸಮಯದಲ್ಲಿ ಬೆಂಬಲವಾಗಿ ನಿಲ್ಲಲಿಲ್ಲ. ಊರಿಗೆ ಉಪಕಾರ ಮಾಡಲು ಹೊರಟ ಸಾಮ್ರಾಟರು ಸ್ವಂತ ತನ್ನ ದೊಡ್ಡಪ್ಪನ ಮಗಳ ನೋವಿಗೆ ಸ್ಪಂಧಿಸಲು ಮುಂದಾಗಲಿಲ್ಲ.
ಮಾನವೀಯತೆ ಮರೆತು ಹೋದಂತೆ ನಟಿಸಿದ ಈ ಪ್ರತಿಷ್ಠಿತ ಕುಟುಂಬಕ್ಕೆ ತನ್ನದೇ ಕುಡಿಯೊಂದು ಬದುಕಿಗಾಗಿ ಹೋರಾಟ ನಡೆಸುತ್ತಿರುವುದು ಕಾಣಲೇ ಇಲ್ಲ. ಯಾರದೋ ಮನೆ ಬಿದ್ದಿದೆ. ಅವರಿಗೊಂದು ಮನೆ ಮಾಡಿಕೊಡಲು ಮುಂದಾಗುವ ಚಿಂತನೆಯ ಕನಿಷ್ಟ ಒಂದಂಶವೂ ತಮ್ಮ ಸಂಸಾರದ ಹೆಣ್ಣು ಮಗಳ ನೋವು ಅರ್ಥವಾಗಲಿಲ್ಲ. ಎರಡು ಹೆಣ್ಣುಮಕ್ಕಳನ್ನು ಕಷ್ಟ ಪಟ್ಟು ಸಾಕುತ್ತಿದ್ದ ದೊಡ್ಡಮ್ಮನ ಸಹಾಯಕ್ಕೆ ನಿಲ್ಲಬೇಕು ಎಂದು ಅನ್ನಿಸಲೇ ಇಲ್ಲ. ಅದು ಬಿಡಿ ಕಳೆದ 9 ವರ್ಷಗಳಿಂದ ನರಳಿಕೊಂಡು ಬದುಕುತ್ತಿದ್ದ ನೀತಾ ಇವರ ಕಣ್ಣಿಗೆ ಕಾಣಲೇ ಇಲ್ಲ...
ಮುಖದರ್ಶನಕ್ಕೂ ಬರಲಿಲ್ಲ..
ಈ ಬದುಕಿಗಿಂತ ಸಾಯುವುದೇ ಮೇಲು ಎಂದು ಕೊಂಡ ಗುಡ್ಡಪ್ಪ ರೈ ಅವರ ಪುತ್ರಿ ನೀತಾ ಮನೆಯಲ್ಲಿ ಯಾರೂ ಇಲ್ಲದ ಸಮಯ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದಳು. ಪ್ರತಿಷ್ಟಿತ ಕುಟುಂಬದಿಂದ 20 ವರ್ಷಗಳ ಹಿಂದೆ ಗುಡ್ಡಪ್ಪ ರೈ ಅವರು ದೂರವಾಗಿದ್ದರೂ ಈ ನೀತಾ ಎಂಬ ಹೆಣ್ಣುಮಗಳು ಇದೇ ಕುಟುಂಬದ ರಕ್ತ ಹಂಚಿಕೊಂಡು ಬೆಳೆದವಳು. ಆಕೆಯ ಸಾವಿಗೆ ಕಣ್ಣೀರು ಮಿಡಿಯಲು ಈ ಪ್ರತಿಷ್ಠಿತ ಕುಟುಂಬದಿಂದ ಯಾರೂ ಬರಲಿಲ್ಲ. ಆಕೆಯ ಮುಖದರ್ಶನವನ್ನೂ ಮಾಡಲು ಕುಟುಂಬಸ್ಥರು ಇಲ್ಲ. ಕನಿಷ್ಠ ದಹನ ಕ್ರಿಯೆಯೂ ಅವರಿಗೆ ಬೇಕಾಗಿಲ್ಲ. ಅಂತಹ ಅಮಾನವೀಯ ನಡತೆಗೆ ಈ ಘಟನೆ ಸಾಕ್ಷಿಯಾಯಿತು. ಎಂತಹುದೇ ಸಮಸ್ಯೆ ಇದ್ದರೂ ಸತ್ತವರ ಮುಖದರ್ಶನ ಮಾಡಲಾದರೂ ಕುಟುಂಬಸ್ಥರು ಬರುತ್ತಾರೆ. ಆದರೆ ಇಲ್ಲಿ ಎಲ್ಲವೂ ತದ್ವಿರುದ್ಧ. ಮೃತದೇಹದ ಅಂತಿಮ ಕಾರ್ಯಗಳಿಗೂ ಬಾರದ ಕುಟುಂಬಸ್ಥರ ನಡವಳಿಕೆಗೆ ವಿರುದ್ಧವಾಗಿ ಕೆಯ್ಯೂರಿನ ಒಂದಷ್ಟು ಸ್ನೇಹಿತರು ಸೇರಿಕೊಂಡು ಮೃತದೇಹದ ಅಂತಿಮ ಕಾರ್ಯಗಳನ್ನು ನಡೆಸಿಕೊಡುವ ಮೂಲಕ ಮಾನವೀಯತೆಯ ಕೆಲಸ ಮಾಡಿದರು. ಪಿಲಿಗೊಬ್ಬಿಗಿಂತಲೂ ಈಕೆಯ ಮುಖದರ್ಶನ ಮಾಡುವ ಯೋಚನೆ ಮಾಡಿದ್ದರೆ, ಆಕೆಯ ಅಂತಿಮ ಕ್ರಿಯೆಗಳಲ್ಲಿ ಭಾಗವಹಿಸಿದ್ದರೆ, ಅದಕ್ಕಿಂತ ದೊಡ್ಡ ಸೇವೆ ಬದುಕಿನಲ್ಲಿ ಮತ್ಯಾವುದೂ ಇಲ್ಲ.