
BELTHANGADY: ಬೆಳ್ತಂಗಡಿಯಲ್ಲಿ ಮೀಸಲು ಅರಣ್ಯಕ್ಕೆ ನುಗ್ಗಿ ಮರ ದೋಚಲು ಯತ್ನ
ಬೆಳ್ತಂಗಡಿ: ಮೀಸಲು ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಹಿಟಾಚಿ ಬಳಸಿ ಬೆಳೆಬಾಳುವ ಮರಗಳನ್ನು ದೋಚಲು ಯತ್ನಿಸುತ್ತಿದ್ದ ಖದೀಮರನ್ನು ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಸೊತ್ತು ಸಹಿತ ರೆಡ್ ಹ್ಯಾಂಡ್ ಅಗಿ ಹಿಡಿದಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಸರ್ವೆ ನಂಬರ್ 158 ರ ಮೀಸಲು ಅರಣ್ಯ ಪ್ರದೇಶದೊಳಗೆ ಹಿಟಾಚಿ ಬಳಸಿ ರಸ್ತೆ ನಿರ್ಮಾಣ ಮಾಡಿ ಬೆಳೆಬಾಳುವ ಮರಗಳನ್ನು ದೋಚುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ಅರಣ್ಯ ಇಲಾಖೆಯ ಆರ್.ಎಫ್.ಒ ತ್ಯಾಗರಾಜ್.ಟಿ.ಎಮ್ ನೇತೃತ್ವದ ತಂಡ ಏ.16 ರಂದು ಸಂಜೆ ದಾಳಿ ನಡೆಸಿ ಸೊತ್ತುಗಳನ್ನು ವಶಪಡಿಸಿಕೊಂಡು ಬೆಳ್ತಂಗಡಿ ನ್ಯಾಯಾಲಯ ಅನುಮತಿ ಪಡೆದು ಏ.19 ರಂದು ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಾಳಿ ವೇಳೆ ಸಾಗಾಟ ಮಾಡಲು ಕಡಿದು ದಾಸ್ತಾನು ಮಾಡಿದ್ದ ಸುಮಾರು 3 ಲಕ್ಷ ಮೌಲ್ಯದ ವಿವಿಧ ಜಾತಿಯ 14.500 ಮೀಟರ್ ಮರಗಳು, 30 ಲಕ್ಷ ಮೌಲ್ಯದ ಒಂದು ಸಾನಿ ಕಂಪನಿಯ ಹಿಟಾಚಿ ಮೇಷಿನ್, 60 ಸಾವಿರ ಮೌಲ್ಯದ ಒಂದು ಮರ ಕಟ್ಟಿಂಗ್ ಮಾಡುವ ಮೆಷಿನ್,15 ಸಾವಿರ ಮೌಲ್ಯದ ಒಂದು ಕಬ್ಬಿಣದ ಸಂಕೋಲೆ ಸೇರಿ ಒಟ್ಟು 33,75,000 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದ ಡೊಂಕಬೆಟ್ಟು ನಿವಾಸಿ ಪ್ರಕಾಶ್ ಪೂಜಾರಿ ಮತ್ತು ಹಿಟಾಚಿ ಮಾಲಕ & ಅಪರೇಟರ್ ಅಗಿರುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನೂರಲ್ಬೆಟ್ಟು ಗ್ರಾಮದ ನಿವಾಸಿ ಕರುಣಾಕರ ಭಂಡಾರಿ ವಿರುದ್ಧ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳಿಗೆ ತನಿಖೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ್ದಾರೆ. ಈ ಬಗ್ಗೆ ತನಿಖೆಯನ್ನು ಅರಣ್ಯಾಧಿಕಾರಿಗಳು ಚುರುಕುಗೊಳಿಸಿದ್ದಾರೆ.
ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಆರ್.ಎಫ್.ಒ ತ್ಯಾಗರಾಜ್.ಟಿ.ಎನ್, ಡಿ.ಆರ್ಎಫ್.ಒ ಕೆ.ರವೀಂದ್ರ ನಾಯ್ಕ್, ಡಿ.ಆರ್.ಎಫ್.ಒ ಸಂದೀಪ್(ವಿಶೇಷ ಪತ್ತೆ ದಳ), ಅರಣ್ಯ ಪಾಲಕ ಪರಶುರಾಮ, ಗಸ್ತು ಅರಣ್ಯ ಪಾಲಕ ಪ್ರತಾಪ್, ವಾಹನ ಚಾಲಕ ಕುಶಲಪ್ಪ ಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.