-->
PUTTUR: ಡೇಂಜರ್... ಡೇಂಜರ್... ಸಾರಡ್ಕದಲ್ಲಿ ತಲೆ ಎತ್ತುತ್ತಿರುವ ಅಪಾಯಕಾರಿ ಕಟ್ಟಡ!?

PUTTUR: ಡೇಂಜರ್... ಡೇಂಜರ್... ಸಾರಡ್ಕದಲ್ಲಿ ತಲೆ ಎತ್ತುತ್ತಿರುವ ಅಪಾಯಕಾರಿ ಕಟ್ಟಡ!?


ಪುತ್ತೂರು: ಬೆಟ್ಟ, ಗುಡ್ಡಗಳು ಕುಸಿದು ಅದೆಷ್ಟೋ ಅನಾಹುತಗಳು ನಡೆದಿರುವುದನ್ನು ಕಂಡಿದ್ದೇವೆ. ಅವೈಜ್ಞಾನಿಕ ರೀತಿಯಲ್ಲಿನ ಬೆಟ್ಟ ಗುಡ್ಡಗಳನ್ನು ಕಡಿದು ಅಲ್ಲಿ ಕಟ್ಟಡಗಳನ್ನು ಕಟ್ಟುವುದು ಅಪಾಯಕಾರಿ ಎಂದು ಅರಿವಿದ್ದರೂ ಅದಕ್ಕೆ ಅನುಮತಿಯನ್ನು ನೀಡಿ ಅಪಾಯಕಾರಿ ಸನ್ನಿವೇಶವನ್ನು ಎದುರು ಹಾಕಿಕೊಳ್ಳುವಂತಹ ಪ್ರಸಂಗಗಳು ನಡೆಯುತ್ತಿರುವುದು ಹೊಸತೇನಲ್ಲ. ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳನ್ನು ಬೆಸೆಯುವಂತಹ ಸಾರಡ್ಕ ಎಂಬ ಪ್ರದೇಶದಲ್ಲಿ ಇಂತಹ ಅಪಾಯಕಾರಿ ಕಟ್ಟಡ ನಿಮಾಣವಾಗುತ್ತಿರುವ ಕುರಿತು ಸಾರ್ವಜನಿಕರು ತೀವ್ರ ಆತಂಕ ಪಡುವಂತಾಗಿದೆ.


ಸಾರಡ್ಕ ಎಂಬುದು ಕೇಪು ಗ್ರಾಮ ಪಂಚಾಯತ್ ವ್ಯಾಪ್ತಿಯಡಿ ಬರುವ ಒಂದು ಪುಟ್ಟ ಊರು. ಇಲ್ಲಿಂದ ಕಾಸರಗೋಡು ಪ್ರವೇಶಿಸಲು ಇರುವ ದೂರ ಕೇವಲ 100 ಮೀಟರ್ ಮಾತ್ರ. ಈ ಎರಡು ಜಿಲ್ಲೆಗಳನ್ನು ಸಂಪರ್ಕಿಸುವ ಪ್ರದೇಶವಾಗಿರುವ ಸಾರಡ್ಕದಲ್ಲಿ ಕೆಲ ಸಮಯಗಳ ಹಿಂದೆ ಪೆಟ್ರೋಲ್ ಬಂಕ್ ಒಂದನ್ನು ತೆರೆಯಲಾಗಿತ್ತು. ಗುಡ್ಡವನ್ನು ಅಗೆದು ಈ ಹೊಸ ಪೆಟ್ರೋಲ್ ಬಂಕನ್ನು ತೆರೆಯಲಾಗಿದೆ. ಇದೀಗ ಇದೇ ಪೆಟ್ರೋಲ್ ಬಂಕ್ ಪಕ್ಕದಲ್ಲೇ ಗುಡ್ಡವನ್ನು ಮತ್ತಷ್ಟು ಅಗೆದು ಬಹು ಮಹಡಿಯ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಈ ಹಿಂದೆ ಮಳೆಗಾಲದ ಸಂದರ್ಭದಲ್ಲಿ ಕೇಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಡೆಗಳಲ್ಲಿ ಗುಡ್ಡ ಕುಸಿತದ ಪ್ರಕರಣಗಳು ನಡೆದು ಸಾರ್ವಜನಿಕರು ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾಗಿತ್ತು.


ಇದೀಗ ಸಾರಡ್ಕದಲ್ಲಿ ಗುಡ್ಡೆ ಅಗೆದು ಅದರ ಪಕ್ಕದಲ್ಲೇ ಬಹು ಮಹಡಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಈ ಕುರಿತು ಸಾರ್ವಜನಿಕರು ತೀವ್ರ ಆತಂಕ ವ್ಯಕ್ತಪಡಿಡುತ್ತಿದ್ದಾರೆ. 2022ರ ಜುಲೈ ತಿಂಗಳಲ್ಲಿ ಇದೇ ಗುಡ್ಡದ ಒಂದು ಬದಿ ರಸ್ತೆಯ ಮೇಲೆ ಕುಸಿತವಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿರುವ ಘಟನೆ ಹಚ್ಚಹಸಿರಾಗಿರುವಂತೆಯೇ ಇದೀಗ ಇಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಪ್ರಶ್ನಾರ್ಥಕವಾಗಿದೆ. ವಾಣಿಜ್ಯ ಉದ್ದೇಶಕ್ಕಾಗಿ ಬಹು ಮಹಡಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಈ ಕುರಿತು ಪಂಚಾಯತ್‍ನಲ್ಲೂ ಸೂಕ್ತ ಮಾಹಿತಿ ಲಭ್ಯವಾಗುತ್ತಿಲ್ಲ. ಗುಡ್ಡಕ್ಕೆ ತಾಗಿಕೊಂಡಂತಿರುವ ಈ ಬಹು ಮಹಡಿ ಕಟ್ಟಡವನ್ನು ಕಂಡರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಖಚಿತವಾಗುತ್ತದೆ. ಈ ಕುರಿತು ಸಾರ್ವಜನಿಕರು ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದರೂ ಯಾರೊಬ್ಬರೂ ಗ್ರಾಮ ಪಂಚಾಯತ್‍ಗೆ ಅಥವಾ ಸಂಬಂಧಪಟ್ಟ ಇಲಾಖೆಗೆ ದೂರು ಸಲ್ಲಿಸುವ ಗೋಜಿಗೆ ಹೋಗಿಲ್ಲ.


ಈ ನಿಟ್ಟಿನಲ್ಲಿ ಅಧಿಕಾರಿಗಳು ಇಂತಹ ಅಪಾಯಕಾರಿ ಕಟ್ಟಡಗಳಿಗೆ ಯಾವ ರೀತಿಯಲ್ಲಿ ಅನುಮತಿಯನ್ನು ನೀಡುತ್ತಾರೆ ಎಂಬುದು ಸಾರ್ವಜನಿಕರ ಪ್ರಶ್ನೆ. ಗುಡ್ಡಕ್ಕೆ ತಾಗಿಕೊಂಡಂತೆಯೇ ಕಟ್ಟಡವನ್ನು ನಿರ್ಮಿಸಲಾಗುತ್ತಿದ್ದು, ಇದರ ಪಕ್ಕದಲ್ಲೇ ಪೆಟ್ರೋಲ್ ಬಂಕ್ ಕಾರ್ಯ ನಿರ್ವಹಿಸುತ್ತಿದೆ. ಇದು ಅಪಾಯಕ್ಕೆ ಆಹ್ವಾನವನ್ನು ನೀಡಿದಂತಿದೆ ಎಂಬುದು ಸಾರ್ವನಿಕರ ಕಳಕಳಿ. ಯಾವುದೇ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಮಾನದಂಡಗಳನ್ನು ಪರಿಗಣಿಸಿಯೇ ಅನುಮತಿ ನೀಡಲಾಗುತ್ತದೆ. ಆದರೆ, ಇಲ್ಲಿ, ಅಪಾಯವನ್ನು ಪರಿಗಣಿಸದೆ ಅನುಮತಿ ನೀಡಿರುವುದು ಯಾಕಾಗಿ ಎಂಬುದು ಸಾರ್ವಜನಿಕರ ಪ್ರಶ್ನೆ.


ದೂರು ಬಂದರೆ ಪರಿಶೀಲನೆ:

ಸಾರಡ್ಕದಲ್ಲಿ ರಾಜ್ಯ ಹೆದ್ದಾರಿ ಪಕ್ಕದಲ್ಲೇ ಗುಡ್ಡವನ್ನು ಅಗೆದು ಕಟ್ಟಡ ನಿರ್ಮಿಸುತ್ತಿರುವ ವಿಚಾರದ ಅರಿವಿದೆ. ಇದಕ್ಕೆ ಪಂಚಾಯತ್‍ನಿಂದ ಅನುಮತಿ ನೀಡಲಾಗಿದೆ. ಆದರೆ, ಸಾರ್ವಜನಿಕರಿಂದ ಇದುವರೆಗೂ ಯಾವುದೇ ದೂರು ಬಂದಿಲ್ಲ. ಆದುದರಿಂದ ಸಾರ್ವಜನಿಕರಿಂದ ಈ ಕುರಿತು ದೂರು ಬಂದಲ್ಲಿ ಪರಿಶೀಲಿಸಲಾಗುವುದು.

- ರಾಘವ ಮಣಿಯಾಣಿ, ಅಧ್ಯಕ್ಷರು, ಕೇಪು ಗ್ರಾಮ ಪಂಚಾಯತ್


ಸಾರ್ವಜನಿಕರಿಗೆ ಪ್ರಶ್ನಿಸುವ ಹಕ್ಕಿದೆ:

ಸಾರಡ್ಕ ಎಂಬ ಪುಟ್ಟ ಊರಿನಲ್ಲಿ ಹೆದ್ದಾರಿ ಬದಿಯಲ್ಲಿ ಅಪಾಯಕರ ರೀತಿಯಲ್ಲಿ ಕಟ್ಟಡ ನಿರ್ಮಿಸುತ್ತಿರುವುದು ಸಾರ್ವಜನಿಕರಲ್ಲಿ ಭೀತಿಯನ್ನು ಮೂಡಿಸಿದೆ. ಈ ಕಟ್ಟಡ ವಾಣಿಜ್ಯ ಬಳಕೆಗಾಗಿ ನಿರ್ಮಾಣ ಮಾಡುವುದಿದ್ದರೆ ಸಾರ್ವಜನಿಕರು ಪ್ರಶ್ನಿಸುವ ಅನಿವಾರ್ಯತೆ ಇದೆ. ಕೊಡಗು, ವಯನಾಡು ಜಿಲ್ಲೆಗಳಲ್ಲಿ ಇದೇ ರೀತಿ ಗುಡ್ಡಗಳನ್ನು ಕಡಿದು ಕಟ್ಟಡ ಕಟ್ಟಿರುವುದರ ಪರಿಣಾಮವನ್ನು ನಾವು ಈಗಾಗಲೇ ನೋಡಿದ್ದೇವೆ. ಇದರಿಂದಾದರೂ ಬುದ್ಧಿ ಕಲಿಯಬೇಕಾಗಿದೆ.

- ಸನತ್ ಕುಮಾರ್, ಸ್ಥಳೀಯರು

Ads on article

Advertise in articles 1

advertising articles 2

Advertise under the article