-->
PUTTUR: ರಂಜಾನ್ ಹಬ್ಬ ಹಿನ್ನೆಲೆ; ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

PUTTUR: ರಂಜಾನ್ ಹಬ್ಬ ಹಿನ್ನೆಲೆ; ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ


ಪುತ್ತೂರು: ಸೌಹಾರ್ದತೆ, ಸಮನ್ವಯತೆಯಿಂದ ಹಾಗೂ ಶಾಂತಿಯುತವಾಗಿ ಹಬ್ಬಗಳ ಆಚರಣೆ ನಡೆಯಬೇಕು. ಸಾರ್ವಜನಿಕರು ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಪುತ್ತೂರು ನಗರ ಪೊಲೀಸ್ ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜ ವಿನಂತಿಸಿದ್ದಾರೆ.

ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ನಡೆಸಲಾದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಮಾ. 31 ರಂದು ರಂಜಾನ್ ಹಬ್ಬ ನಡೆಯಲಿದ್ದು, ಯಾವುದೇ ಮೆರವಣಿಗೆಗಳು ಇರುವುದಿಲ್ಲ. ಮಸೀದಿಯಲ್ಲಿ ಕಾರ್ಯಕ್ರಮಗಳು ಮಾತ್ರ ನಡೆಯುತ್ತವೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ವಾಟ್ಸಪ್‌ಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಬೇಡಿ. ಯಾವುದೇ ಘಟನೆಗಳಿಗೆ ಸಂಬಂಧಿಸಿದಂತೆ ಅನುಮಾನಗಳಿದ್ದರೆ ನಮ್ಮಲ್ಲಿ ಮಾಹಿತಿ ಕೇಳಿ. ನಾವು ಸರಿಯಾದ ಮಾಹಿತಿ ನೀಡುತ್ತೇವೆ ಎಂದು ಇನ್‌ಸ್ಪೆಕ್ಟರ್ ಹೇಳಿದರು.

ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ರಂಜಾನ್ ಹಬ್ಬದ ಸಂದರ್ಭದಲ್ಲಿ ಅಕ್ರಮ ಗೋ ಸಾಗಾಟಕ್ಕೆ ಆಸ್ಪದ ಕೊಡಬೇಡಿ. ಗಾಂಜಾ, ಡ್ರಗ್ಸ್ ಮಾಫಿಯ ಎಲ್ಲಾ ಸಮುದಾಯದ ಯುವಕರಲ್ಲಿ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ಇದನ್ನು ಗಂಭೀರವಾಗಿ  ಪರಿಗಣಿಸಬೇಕು. ವಾಟ್ಸಪ್ ಗ್ರೂಪ್ ಮಾಡಿ ಆ ಮೂಲಕ ಮಾದಕ ವಸ್ತುಗಳ ವ್ಯವಹಾರ ಮಾಡುತ್ತಿರುವುದೂ ಗಮನಕ್ಕೆ ಬಂದಿದೆ ಎಂದು ಹೇಳಿದರು.


ಇತ್ತೀಚಿಗೆ ನೈತಿಕ ಪೊಲೀಸ್‌ಗಿರಿ ಕಡಿಮೆ ಆಗಿದೆ. ಅದಕ್ಕೆ ಕಾನೂನಿನಲ್ಲಿ ಅವಕಾಶವೂ ಇಲ್ಲ. ಡ್ರಗ್ಸ್ ಬಗ್ಗೆ ತಿಳಿದುಬಂದರೆ ಮೇಲಾಧಿಕಾರಿಗಳಿಗೂ ಮಾಹಿತಿ ನೀಡುವ ಅವಕಾಶವಿದೆ. ಒಮ್ಮೆ ಡ್ರಗ್ಸ್ ತೆಗೆದುಕೊಂಡರೆ 3 ತಿಂಗಳು ದೇಹದಲ್ಲಿ ಇರುತ್ತದೆ. ಎಲ್ಲರೂ ಸಮನ್ವಯದಿಂದ ಜಾಗೃತಿ ಕೆಲಸ ಮಾಡೋಣ ಎಂದು ಇನ್‌ಸ್ಪೆಕ್ಟರ್ ಹೇಳಿದರು.

ವಿಹಿಂಪ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಮಾತನಾಡಿ, ಮಾದಕ ವಸ್ತುಗಳ ಬಳಕೆ ಪಕ್ಷ, ಧರ್ಮ ಎಲ್ಲವನ್ನು ಹಾಳು ಮಾಡುತ್ತದೆ. ಇದರ ವಿರುದ್ಧ ಜಾಗೃತಿ ಹೆಚ್ಚಾಗಬೇಕು ಎಂದರು.

ಕಾಂಗ್ರೆಸ್ ಮುಖಂಡ ಎ. ಹೇಮನಾಥ ಶೆಟ್ಟಿ ಮಾತನಾಡಿ, ಪೊಲೀಸರ ಮೇಲೆ ಬಹಳಷ್ಟು ನಿರೀಕ್ಷೆ ಇದೆ. ಮಾದಕ ವಸ್ತುಗಳ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು. `ಪೊಲೀಸ್ ಗಿರಿ' ಕಠಿಣವಾಗಿ ಮಾಡಿದರೆ ಉಳಿದವರ ಹಸ್ತಕ್ಷೇಪ ಅಗತ್ಯ ಬರುದಿಲ್ಲ. ಈ ವಿಚಾರದಲ್ಲಿ ಕಾಂಪ್ರಮೈಸ್ ಬೇಡ. ಜನರಿಗೆ ಪೊಲೀಸ್ ಭಯ ಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖಂಡರ ಮೂಲಕ ಪೊಲೀಸರ ಕೈ ಕಟ್ಟುವ ಕೆಲಸವೂ ಆಗುತ್ತದೆ. ಇದು ಆಗಬಾರದು. ಕೆಲವು ಕಠಿನ ಘಟನೆಗಳ ಸಂದರ್ಭದಲ್ಲಿ  ಸುಮೊಟೊ ಕೇಸು ಹಾಕಬೇಕು ಎಂದು ಸಭೆಯಿಂದ ಅಭಿಪ್ರಾಯ ಕೇಳಿಬಂತು.

ಸಭೆಯಲ್ಲಿ ಪ್ರಮುಖರಾದ ದಾಮೋದರ ಪಾಟಾಲಿ, ಸೀತಾರಾಮ ಶೆಟ್ಟಿ ಕೆದಂಬಾಡಿಗುತ್ತು, ಹಮೀದ್ ಸಾಲ್ಮರ, ನ್ಯಾಯವಾದಿ ನೂರುದ್ದಿನ್ ಸಾಲ್ಮರ, ರವಿ ಪ್ರಸಾದ್ ಶೆಟ್ಟಿ, ಮೌರಿಸ್ ಮಾಸ್ಕರೇನಸ್, ಯಾಕೂಬ್ ಮುಲಾರ್ ಸೇರಿದಂತೆ ಹಲವರು ಪಾಲ್ಗೊಂಡರು.


ಸೈಬರ್ ಕ್ರೈಂ, ಡಿಜಿಟಲ್ ಅರೆಸ್ಟ್, ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಕುರಿತು ಎಲ್ಲರೂ ಜಾಗೃತರಾಗಬೇಕು. ಇಂತಹ ಕರೆಗಳು ಬಂದರೆ ತಕ್ಷಣ ಸಹಾಯವಾಣಿ 1930ಗೆ ಕರೆ ಮಾಡಬೇಕು.

-ಆಂಜನೇಯ ರೆಡ್ಡಿ, ಸಬ್ ಇನ್‌ಸ್ಪೆಕ್ಟರ್, ನಗರ ಪೊಲೀಸ್ ಠಾಣೆ

Ads on article

Advertise in articles 1

advertising articles 2

Advertise under the article