-->
PUTTUR: ವಿಟ್ಲದ ಮಾಡತ್ತಡ್ಕದಲ್ಲಿ ಭಾರೀ ಸ್ಫೋಟ; ಬೆಚ್ಚಿ ಬಿದ್ದ 5 ಗ್ರಾಮದ ಜನ

PUTTUR: ವಿಟ್ಲದ ಮಾಡತ್ತಡ್ಕದಲ್ಲಿ ಭಾರೀ ಸ್ಫೋಟ; ಬೆಚ್ಚಿ ಬಿದ್ದ 5 ಗ್ರಾಮದ ಜನ

 

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಕಪ್ಪು ಕಲ್ಲುಗಳ ಗಣಿಗಾರಿಕಾ ಪ್ರದೇಶವೆಂದೇ ಖ್ಯಾತಿವೆತ್ತ ವಿಟ್ಲದ ಮಾಡತ್ತಡ್ಕ ಎಂಬಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಇಂದು ಮಧ್ಯಾಹ್ನ ಸುಮಾರು 1.30 ರ ವೇಳೆಗೆ ಈ ಸ್ಫೋಟ ಸಂಭವಿಸಿದ್ದು,ಸ್ಫೋಟದ ರಭಸಕ್ಕೆ ಐದು ಗ್ರಾಮಗಳ ಜನ ನಲುಗಿ ಹೋಗಿದ್ದಾರೆ‌. ಇಲ್ಲಿನ ಕಪ್ಪು ಕಲ್ಲುಗಣಿಗಾರಿಕೆಗೆ ಸೇರಿದ ಕಾರ್ಮಿಕರು ತೆರೆದ ಪ್ರದೇಶದಲ್ಲಿ ನೂರಕ್ಕೂ ಮಿಕ್ಕಿದ ಜಿಲಿಟಿನ್ ಕಡ್ಡಿ, 50ಕ್ಕೂ ಮಿಕ್ಕಿದ ಡಿಟೋನೇಟರ್ ಗಳನ್ನು ಅಜಾಗರೂಕತೆಯಿಂದ ಇಟ್ಟ ಪರಿಣಾಮ ಬಿಸಿಲಿನ ಝಳಕ್ಕೆ ಇವುಗಳು ಬ್ಲಾಸ್ಟ್ ಆಗಿದ್ದು, ಅಕ್ಕಪಕ್ಕದ ಸುಮಾರು 12 ಕ್ಕೂ ಮಿಕ್ಕಿದ ಮನೆಗಳಿಗೆ ಹಾನಿಯಾಗಿದೆ.


ಹೌದು ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮದ ಮಾಡತ್ತಡ್ಕ ಎಂಬಲ್ಲಿ ಇಂದು ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು, ಸ್ಫೋಟದ ರಭಸಕ್ಕೆ ಐದು ಗ್ರಾಮಗಳ ಜನ ಬೆಚ್ಚಿ ಬಿದ್ದಿದ್ದಾರೆ. ಇಲ್ಲಿ ಸುಮಾರು 12 ವರ್ಷಗಳಿಂದ ಕಪ್ಪು ಕಲ್ಲುಗಣಿಗಾರಿಕೆ ನಡೆಸುತ್ತಿರುವ ಎನ್.ಎಸ್ ಕ್ರಶರ್ ಎನ್ನುವ ಸಂಸ್ಥೆಗೆ ಸೇರಿದ ಸ್ಪೋಟಕಗಳು ಇದಾಗಿದ್ದು, ಅಕ್ರಮವಾಗಿ ದೈವಗಳಿಗೆ ಸೇರಿದ ಜಾಗದಲ್ಲಿ ಈ ಸ್ಫೋಟಕಗಳನ್ನು ಇರಿಸಲಾಗಿತ್ತು. ಬಿಸಿಲಿಗೆ ಈ ಸ್ಫೋಟಕಗಳು ಏಕಾಏಕಿ ಸ್ಫೋಟಗೊಂಡ ಪರಿಣಾಮ, ಸ್ಫೋಟಗೊಂಡ ಪ್ರದೇಶ ಸಂಪೂರ್ಣ ಛಿದ್ರಛಿದ್ರವಾಗಿ ಹೋಗಿದೆ. ಸ್ಫೋಟದ ಘರ್ಷಣೆಗೆ ಸುಮಾರು 20 ಮೀಟರ್ ದೂರದಲ್ಲಿದ್ದ ಮನೆಗಳಲ್ಲಿ ಬಿರುಕು, ಕಿಟಕಿ ಗಾಜುಗಳು ಪುಡಿಯಾಗಿದ್ದು, ಮೇಲ್ಛಾವಣಿ ಕುಸಿದು ಬಿದ್ದಿವೆ. ಸುಮಾರು 12 ಮನೆಗಳಿಗೆ ಹೆಚ್ಚಿನ ಹಾನಿಯಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.


ಸ್ಫೋಟಗೊಂಡ ಪರಿಸರದ ಸುಮಾರು ಇನ್ನೂರು ಮೀಟರ್ ವ್ಯಾಪ್ತಿ ಪ್ರದೇಶದ ಗಿಡ ಮರಗಳ ಎಲೆಗಳು ಚೂರು ಚೂರಾಗಿ ಬಿದ್ದಿರೋದು ಸ್ಪೋಟದ ತೀವೃತೆಗೆ ಸಾಕ್ಷಿಯಾಗಿ ನಿಂತಿವೆ‌. ಸ್ಫೋಟದ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ನೀರು ಹಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಸ್ಫೋಟಕಗಳನ್ನು ಅಕ್ರಮವಾಗಿ, ಅಜಾಗರೂಕತೆಯಿಂದ ದಾಸ್ತಾನಿರಿಸಿದ ಸಂಸ್ಥೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕ್ರಶರ್ ಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನೂ ವಶಪಡಿಸಿಕೊಳ್ಳಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.


ಘಟನೆ ನಡೆದ ಪ್ರದೇಶಕ್ಕೆ ಆಗಮಿಸಿದ ಅಧಿಕಾರಿಗಳ ಮೇಲೆ ಸ್ಥಳೀಯರು ತಮ್ಮ ಆಕ್ರೋಶವನ್ನೂ ವ್ಯಕ್ತಪಡಿಸಿದ್ಧಾರೆ. ವಸತಿ ಪ್ರದೇಶಗಳಿಂದ ಕೇವಲ 30 ಮೀಟರ್ ದೂರದಲ್ಲಿ ಸ್ಪೋಟಕಗಳನ್ನು ಸಿಡಿಸಿ ಈ ಭಾಗದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಗಳು ಮಾತ್ರ ಗಾಢ ನಿದ್ರೆಗೆ ಜಾರಿದೆ ಎನ್ನುವುದಕ್ಕೆ ಇಂದಿನ ಘಟನೆ ಸಾಕ್ಷಿಯಂತಿದೆ.

Ads on article

Advertise in articles 1

advertising articles 2

Advertise under the article