
PUTTUR: ನಾಳೆ ಪುತ್ತೂರು ಕೋಟಿ-ಚೆನ್ನಯ ಕಂಬಳ...
ಪುತ್ತೂರು: 32ನೇ ವರ್ಷದ ಪುತ್ತೂರಿನ ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಮಾ.1 ಹಾಗೂ 2 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹ ಆಶೀರ್ವಾದಗಳಿಂದ, ಪದ್ಮವಿಭೂಷಣ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಕೀರ್ತಿಶೇಷ ಜಯಂತ ರೈ ಹಾಗೂ ಮಾಜಿ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆಯವರ ಗೌರವಾಧ್ಯಕ್ಷತೆಯಲ್ಲಿ ಆರಂಭಗೊಂಡ ಕಂಬಳ ಈ ಬಾರಿ 32ನೇ ವರ್ಷಕ್ಕೆ ಕಾಲಿಟ್ಟಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೆ. ಎಸ್. ಅವರ ಗೌರವ ಸಂಚಾಲಕತ್ವದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರ ಮಾರ್ಗದರ್ಶನ ದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಮಾ.1 ಶನಿವಾರ ಬೆಳಿಗ್ಗೆ 10.15ಕ್ಕೆ ಕಂಬಳದ ಉದ್ಘಾಟನೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ನೆರವೇರಿಸಲಿದ್ದು, ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಅಧ್ಯಕ್ಷತೆ ವಹಿಸುವರು.
ಸಂಜೆ 6 ಗಂಟೆಗೆ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಅಶೋಕ್ ಕುಮಾರ್ ರೈ ವಹಿಸಲಿದ್ದು, ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಗೃಹ ಸಚಿವ ಡಾ ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಬೆಂಗಳೂರು ಎಂ.ಆರ್.ಜಿ. ಗ್ರೂಪ್ಸ್ನ ಚೇರ್ಮ್ಯಾನ್ ಪ್ರಕಾಶ್ ಜಿ., ಮಂಡ್ಯ ಶಾಸಕ ರವಿ ಗಾಣಿಗ, ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್, ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ರಮಾನಾಥ ರೈ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ಶಾಸಕಿ ಭಾಗೀರಥ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಕಿಶೋರ್ ಕುಮಾರ್ ಪುತ್ತೂರು, ಮಾಜಿ ಸಚಿವ ಅಭಯಚಂದ್ರ ಜೈನ್ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ। ಅಗರಿ ನವೀನ್ ಭಂಡಾರಿ (ಬ್ಯಾಂಕಿಂಗ್), ಸುರೇಶ್ ಭಟ್ ಬಲ್ನಾಡು (ಕೃಷಿ), ರೆ. ಫಾ| ವಿಜಯ ಹಾರ್ವಿನ್ (ಶೈಕ್ಷಣಿಕ) ಹರಿಪ್ರಸಾದ್ ರೈ (ಸಂಸ್ಥಾಪಕರು ಹೆಚ್. ಪಿ.ಆರ್. ವರ್ಸಿಂಗ್ ಕಾಲೇಜು. ಸಾಲೆತ್ತೂರು) ಮಹಮ್ಮದ್ ಕುಂಞಿ (ಕಂಬಳ) ಬಾಳೆಪುಣಿ ಸಂಕ ಇದು ಕುಂಞಿ ಬ್ಯಾರಿ (ಕಂಬಳ) ವಿನ್ವೆಂಟ್ ಫೆರ್ನಾಂಡಿಸ್ (ಸಾಮಾಜಿಕ, ಶೈಕ್ಷಣಿಕ) ಅವರಿಗೆ ಸನ್ಮಾನ ನಡೆಯಲಿದೆ ಎಂದು ಹೇಳಿದರು.
ಮಾ.2 ಆದಿತ್ಯವಾರ ಬಹುಮಾನ ವಿತರಣೆ ಸಮಾರಂಭ ನಡೆಯಲಿದ್ದು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ, ಸೇರಿದಂತೆ ಮತ್ತಿತರರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ರಾಜ್ಯಮಟ್ಟದ ಕೆಸರುಗದ್ದೆ ಓಟ ಸ್ಪರ್ಧೆ:
ಈ ಬಾರಿ ವಿಶೇಷವಾಗಿ ಪುತ್ತೂರು ಕಂಬಳದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಪುರುಷರ ರಾಜ್ಯಮಟ್ಟದ ಕೆಸರುಗದ್ದೆ ಓಟ ಸ್ಪರ್ಧೆ ನಡೆಯಲಿದೆ. ಮಾ.1 ರಂದು ಬೆಳಿಗ್ಗೆ 12 ಗಂಟೆಗೆ ಪ್ರೋ ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ ಚಾಲನೆ ನೀಡಲಿದ್ದಾರೆ.
ವಿಶೇಷ ಆಕರ್ಷಣೆ:
ನಟಿ ರಚಿತಾ ರಾಮ್, ನಿರೂಪಕಿ ಅನುಶ್ರೀ, ಬಿಗ್ ಬಾಸ್ ಖ್ಯಾತಿಯ ಹನುಮಂತು, ಧನರಾಜ್ ಆಚಾರ್ಯ, ಉಗ್ರಂ ಮಂಜು, ನಟಿ ರಚನಾ ರೈ, ನಟ ಲೂಸ್ ಮಾದ ಮೊದಲಾದವರು ಭಾಗವಹಿಸಿಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿ ಸಂಚಾಲಕ ವಸಂತ ಕುಮಾರ್ ರೈ ದುಗ್ಗಳ , ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ., ನಿರಂಜನ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.