ಕಿನ್ನಿಗೋಳಿ: ಮತ್ತೆ ಪ್ರತ್ಯಕ್ಷವಾದ ಚಿರತೆ; ಸಿಸಿಟಿವಿಯಲ್ಲಿ ಸೆರೆ! ಸ್ಥಳೀಯರಲ್ಲಿ ಆತಂಕ
Thursday, December 26, 2024
ಮುಲ್ಕಿ: ಇಲ್ಲಿನ ಕಿನ್ನಿಗೋಳಿಯ ಎಳತ್ತೂರು ದೇವಾಲಯ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷಗೊಂಡಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ. ಬುಧವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ಶಿಮಂತೂರು ಶಾಲೆ ಬಳಿಯ ಎಳತ್ತೂರು ದೇವಾಲಯ ರಸ್ತೆಯಲ್ಲಿರುವ ವೇದವ್ಯಾಸ ಭಟ್ ಎಂಬವರ ಮನೆಯ ಮುಂಭಾಗದಲ್ಲಿ ಚಿರತೆ ಹಾದುಹೋಗಿರುವುದನ್ನು ಮನೆ ಮಂದಿ ಕಂಡಿದ್ದಾರೆ. ಜೊತೆಗೆ ಅವರ ಮನೆಯ ಸಾಕು ನಾಯಿ ಬೆನ್ನಟ್ಟಿದ್ದರಿಂದ ಚಿರತೆಯು ಮುಂದೆ ಸಾಗಿದೆ. ಬಳಿಕ ಕೆರೆಗುತ್ತು ಕಡೆಗೆ ತೆರಳಿರುವ ಸಾಧ್ಯತೆ ಇದ್ದು, ಸ್ಥಳೀಯ ಪರಿಸರದ ನಾಯಿಗಳು ಮಧ್ಯರಾತ್ರಿವರೆಗೂ ಬೊಗಳುತ್ತಲೇ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೇ ಪರಿಸರದಲ್ಲಿ ಇತ್ತೀಚೆಗೆ ಹಲವು ಬಾರಿ ಚಿರತೆ ಕಾಣಿಸಿಕೊಳ್ಳುತ್ತಲೇ ಇದ್ದು, ಸ್ಥಳೀಯವಾಗಿ ಶಾಲೆ ಹಾಗೂ ಟ್ಯೂಶನ್‌ಗೆ ತೆರಳುವ ಮಕ್ಕಳು ಇದೇ ದಾರಿಯನ್ನು ಅವಲಂಬಿಸಬೇಕಿದ್ದು, ಪೋಷಕರು ಆತಂಕ ಪಡುವಂತಾಗಿದೆ. ಬುಧವಾರ ಪ್ರತ್ಯಕ್ಷಗೊಂಡಿದ್ದ ಚಿರತೆಯ ಓಡಾಟ ಅದೇ ರಸ್ತೆಯಲ್ಲಿರುವ ಮನೆಯೊಂದರ ಸಿಸಿಟಿವಿಯಲ್ಲಿ ದಾಖಲಾಗಿದೆ.