.jpg)
APMC: ಸರ್ಕಾರಿ ಕೆಲಸದಿಂದ ನಿವೃತ್ತಿಗೊಂಡು 6 ವರ್ಷವಾದ್ರೂ ಇನ್ನೂ ಸಿಕ್ಕಿಲ್ಲ ಸಮೂಹ ವಿಮೆ!!
ಪುತ್ತೂರು: ಸರಕಾರಿ ಕೆಲಸದಲ್ಲಿದ್ದ ಉದ್ಯೋಗಿಗಳು ನಿವೃತ್ತಿ ಜೀವನದ ಬಳಿಕ ತಮಗೆ ಬರಬೇಕಾದ ಹಣದಿಂದ ನೆಮ್ಮದಿಯ ಜೀವನ ಸಾಗಿಸಬೇಕು ಎನ್ನುವ ಲೆಕ್ಕಾಚಾರವನ್ನು ಮಾಡೋದು ಸಹಜ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನಿವೃತ್ತ ಸರಕಾರಿ ಉದ್ಯೋಗಿಯೊಬ್ಬರಿಗೆ ಈ ಭಾಗ್ಯ ಮಾತ್ರ ಈವರೆಗೆ ಸಿಕ್ಕಿಲ್ಲ. ಡಿ ಗ್ರೂಪ್ ನೌಕರರಾಗಿದ್ದ ಇವರಿಗೆ ಎಲ್ಲಾ ಸರಕಾರಿ ನೌಕರರಿಗೆ ಇರುವಂತೆ ಸಮೂಹ ವಿಮೆಯನ್ನು ಸರಕಾರ ಮಾಡಿಸಿತ್ತು. ಆದರೆ ನಿವೃತ್ತಿಯಾಗಿ 6 ವರ್ಷ ಕಳೆದರೂ, ಆ ಹಣಕ್ಕಾಗಿ ಈ ವ್ಯಕ್ತಿ ಇಂದಿಗೂ ಕಚೇರಿ ಅಲೆಯುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ ಬಿ.ಹೆಚ್.ಮಹಮ್ಮದ್, ಪುತ್ತೂರು ಎಪಿಎಂಸಿಯಲ್ಲಿ ಗುಮಾಸ್ತನಾಗಿ ದುಡಿಯುತ್ತಿದ್ದರು. 2018ಕ್ಕೆ ಇವರು ತಮ್ಮ ಸೇವೆಯಿಂದ ನಿವೃತ್ತಿಹೊಂದಿದ್ದು, ಕಚೇರಿಯಲ್ಲಿ ಗೌರವ ಸ್ವೀಕರಿಸಿ ಹೋದವರು ಇನ್ನು ಕಚೇರಿಗೆ ಬರುವ ಅಗತ್ಯವಿಲ್ಲ ಎಂದು ಅಂದೇ ಮನಸ್ಸಿನಲ್ಲಿ ದೃಢ ಮಾಡಿಕೊಂಡಿದ್ದರು. ಆದರೆ ನಿವೃತ್ತಿಯಾಗಿ ಆರು ವರ್ಷ ಕಳೆದರೂ ಈ ತನಕವೂ ಮಹಮ್ಮದ್ ಅವರಿಗೆ ಕಚೇರಿ ಅಲೆಯುವ ಸಂಕಷ್ಟ ತಪ್ಪಿಲ್ಲ. ಯಾಕಂದ್ರೆ ಇವರಿಗೆ ಸಿಗಬೇಕಾದ ಸಮೂಹ ವಿಮೆ ಇನ್ನೂ ಸಿಕ್ಕಿಲ್ಲ. ಹಲವು ಬಾರಿ ಕಚೇರಿ ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.
ಇನ್ನು ನಿವೃತ್ತಿ ಬಳಿಕದ ಸಮೂಹ ವಿಮೆಯ ಎಲ್ಲಾ ದಾಖಲೆಗಳನ್ನು ಮಹಮ್ಮದ್ ಎಪಿಎಂಸಿ ಆಡಳಿತ ಕಚೇರಿಗೆ ನೀಡಿದ್ದಾರೆ. ಆದ್ರೆ ಒಂದು ವರ್ಷ ಕಳೆದರೂ ವಿಮೆಯ ಹಣ ಬರದ ಕಾರಣ ಈ ಬಗ್ಗೆ ಅಧಿಕಾರಿಗಳಲ್ಲಿ ಪ್ರಶ್ನಿಸಿದಾಗ ಬರುತ್ತದೆ ಎನ್ನುವ ಉತ್ತರವನ್ನೇ ನೀಡಲಾಗಿತ್ತು. ಆದರೆ ಮಹಮ್ಮದ್ ನೀಡಿದ್ದ ದಾಖಲೆಗಳೆಲ್ಲವೂ ಕಚೇರಿಯಿಂದ ನಾಪತ್ತೆಯಾದ ಕಾರಣ, ವಿಮೆಯ ಹಣ ಬಿಡುಗಡೆಯ ಪ್ರಕ್ರಿಯೆ ಈವರೆಗೂ ನಡೆಸಿಲ್ಲ. ಇದೀಗ ಅಧಿಕಾರಿಗಳು ಕೂಡಲೇ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ಮಹಮ್ಮದ್ ಗೆ ನೀಡಿದ್ದಾರೆ. ಡಿ ಗ್ರೂಪ್ ನೌಕರನಾಗಿದ್ದ ಮಹಮ್ಮದ್ ಅವರಿಗೆ ಅಧಿಕಾರಿಗಳಿಗೆ ಸಿಗುವಷ್ಟು ದೊಡ್ಡ ಮೊತ್ತದ ಹಣ ಸಿಗುವುದಿಲ್ಲ. ಆದರೆ ಸಿಕ್ಕಿದ್ದು, ಜೀವನ ನಿರ್ವಹಣೆಗೆ ಸಾಕು ಎಂದು ಹಾತೊರೆಯುತ್ತಿರುವ ನಿವೃತ್ತ ಉದ್ಯೋಗಿಗೆ ತಕ್ಷಣವೇ ಸಂಬಂಧಪಟ್ಟ ಇಲಾಖೆ ಸ್ಪಂದಿಸಬೇಕಾಗಿದೆ.