.jpg)
PUTTUR: ಪುತ್ತೂರಿನಲ್ಲಿ `ಚಡ್ಡಿ' ಇಲ್ಲದ ಗ್ಯಾಂಗ್!?
ಪುತ್ತೂರು: ನಾಲ್ಕು ಮಂದಿಯನ್ನೊಳಗೊಂಡ `ಚಡ್ಡಿ ಗ್ಯಾಂಗ್' ದರೋಡೆಕೋರರು ಬಂದು ತಲುವಾರು ತೋರಿಸಿ ಬೆದರಿಸಿ, ಹಣ, ಒಡವೆ ಕೇಳಿದ್ದಾರೆ. ನಾನು ಕಿಟಕಿಯ ಮೂಲಕ ಅವರ ಫೋಟೋ ತೆಗೆದಿದ್ದೇನೆ' ಎಂದು ಕಟ್ಟು ಕಥೆ ಹೆಣೆದು, ಚಡ್ಡಿ ಗ್ಯಾಂಗ್ ಹೋಲುವ ಪೊಟೋದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಡುವ ಮೂಲಕ ಕೆಯ್ಯೂರು ಗ್ರಾಮದ ಜನತೆಯಲ್ಲಿ ಭೀತಿಯ ವಾತಾವರಣ ಸೃಷ್ಠಿಸಿದ್ದ ಕೇರಳ ಮೂಲದ ಮಹಿಳೆಯ ಕುಟುಂಬಕ್ಕೆ ಗ್ರಾಮ ಬಿಟ್ಟು ತೆರಳುವಂತೆ ಕೆಯ್ಯೂರು ಗ್ರಾಮ ಪಂಚಾಯಿತಿ ಸೂಚನೆ ನೀಡಿದೆ.
ಕೆಯ್ಯೂರು ಗ್ರಾಮದ ಸಣಂಗಳ ಎಂಬಲ್ಲಿನ ನಿವಾಸಿ ಭಾತಿಷಾ ಎಂಬವರಿಗೆ ಸೇರಿರುವ ಬಾಡಿಗೆ ಮನೆಯಲ್ಲಿ, ರಬ್ಬರ್ ಟ್ಯಾಪಿಂಗ್ ಮತ್ತು ರಬ್ಬರ್ ಹಾಲು ಸಂಗ್ರಹ ವೃತ್ತಿ ಮಾಡುತ್ತಿದ್ದ ಕೇರಳ ಮೂಲದ ಸೈಂಟ್ ಜಾರ್ಚ್ ಮತ್ತು ತನ್ನ ಎಳೆಯ ಪ್ರಾಯದ ಮಗುವಿನೊಂದಿಗೆ ವಾಸ್ತವ್ಯವಿದ್ದ ಕೇರಳ ಮೂಲದ ಮಾರ್ಗರೇಟ್ ತನ್ನ ಅವಾಂತರದ ಮೂಲಕ ಗ್ರಾಮದ ಜನತೆಯಲ್ಲಿ ಭೀತಿಯ ವಾತವಾರಣ ಸೃಷ್ಠಿಸಿ ತನ್ನ ವಾಸ್ತವ್ಯವನ್ನು ಬದಲಾಯಿಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ತಂದೊಡ್ಡಿಕೊಂಡಿದ್ದಾಳೆ.
ಮಂಗಳವಾರ ರಾತ್ರಿ ಸುಮಾರು 8.30ರ ವೇಳೆಗೆ ನನ್ನ ಮನೆಗೆ ನಾಲ್ಕು ಮಂದಿ ಇದ್ದ `ಚಡ್ಡಿ ಗ್ಯಾಂಗ್' ದರೋಡೆಕೋರರು ಬಂದಿದ್ದಾರೆ. ತಲವಾರು ತೋರಿಸಿ ಬೆದರಿಸಿ, ಹಣ, ಒಡವೆ ಕೇಳಿದ್ದಾರೆ. ನಾನು ಕಿಟಕಿಯ ಮೂಲಕ ಅವರ ಫೋಟೋ ತೆಗೆದಿದ್ದೇನೆ ಎಂದು ಮಾರ್ಗರೇಟ್ ಬಾಡಿಗೆ ಮನೆಯ ಮಾಲಕನ ಮೊಬೈಲ್‍ಗೆ ಬಡ್ಡಿ ಗ್ಯಾಂಗ್ ಹೋಲುವ ರೀತಿಯ ಪೊಟೋದೊಂದಿಗೆ ಸಂದೇಶ ರವಾನಿಸಿದ್ದಳು. ಅಲ್ಲದೆ ಈ ವಿಚಾರ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲು ಕಾರಣಳಾಗಿದ್ದಳು. ಇದರಿಂದಾಗಿ ಕೆಯ್ಯೂರು ಗ್ರಾಮ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮ ವ್ಯಾಪ್ತಿಗಳಲ್ಲಿ ಭಯದ ವಾತಾವರಣ ಸೃಷ್ಠಿಯಾಗಿತ್ತು. ಬುಧವಾರ ಸ್ಥಳಕ್ಕೆ ಪರಿಶೀಲನೆಗಾಗಿ ಪೊಲೀಸರು ಹಾಗೂ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಜನತೆ ತೆರಳಿದ್ದ ವೇಳೆಯೂ ಆಕೆಯ ವರ್ತನೆ ವಿಚಿತ್ರವಾಗಿತ್ತು. ಆ ಮನೆಗೆ ರಾತ್ರಿ ವೇಳೆ ಜನ ಸೇರುತ್ತಿದ್ದಾರೆ ಎಂಬ ಆರೋಪ ಮತ್ತು ಮಹಿಳೆಯ ಈ ಕಟ್ಟುಕಥೆಯ ಹಿಂದೆ ಯಾವುದಾದರೂ ರಹಸ್ಯ ಚಟುವಟಿಕೆಯ ಷಡ್ಯಂತ್ರ ಇರಬಹುದು ಎಂಬ ಶಂಕೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಕೆಯ್ಯೂರು ಗ್ರಾಮ ಪಂಚಾಯಿತಿ ಬಾಡಿಗೆ ಮನೆ ಖಾಲಿ ಮಾಡಿ ಗ್ರಾಮ ಬಿಟ್ಟು ತೆರಳುವಂತೆ ಸೂಚನೆ ನೀಡಿದೆ.
`ಚಡ್ಡಿ ಗ್ಯಾಂಗ್' ರದ್ಧಾಂತ ಸೃಷ್ಟಿಯು ಯಾವುದೋ ಷಡ್ಯಂತ್ರವಿರಬಹುದೆನ್ನುವ ನಿಗೂಢತೆಯನ್ನು ಹುಟ್ಟು ಹಾಕಿದ್ದು, ಆಕೆಯ ವರ್ತನೆಯೂ ವಿಚಿತ್ರವಾಗಿದೆ. ಈಗಾಗಲೇ ಮಾರ್ಗರೇಟ್ ಕುಟುಂಬ ವಾಸ್ತವ್ಯವಿರುವ ಬಾಡಿಗೆ ಮನೆಯನ್ನು ಖಾಲಿ ಮಾಡಿಸುವಂತೆ ಮನೆಯ ಮಾಲಕರಿಗೆ ವಿನಂತಿಸಿಕೊಳ್ಳಲಾಗಿದೆ. ಅಲ್ಲದೆ ಅವರಿಗೂ ಮನೆ ಖಾಲಿ ಮಾಡಿ ಗ್ರಾಮ ಬಿಟ್ಟು ತೆರಳುವಂತೆ ಸೂಚಿಸಲಾಗಿದ್ದು, ಗುರುವಾರ ಮನೆ ಖಾಲಿ ಮಾಡಲಾಗುತ್ತಿದೆ.
- ಶರತ್‍ಕುಮಾರ್ ಮಾಡಾವು, ಕೆಯ್ಯೂರು ಗ್ರಾ.ಪಂ. ಅಧ್ಯಕ್ಷ
ಪೊಲೀಸ್ ತನಿಖೆಯಿಂದ ಸತ್ಯಾಂಶ ಬಯಲು: ಕೆಯ್ಯೂರಿಗೆ ಚಡ್ಡಿ ಗ್ಯಾಂಗ್ ಬಂದಿದ್ದಾರೆ ಎನ್ನುವ ಸುದ್ದಿ ಬುಧವಾರ ಬೆಳಿಗ್ಗೆ ಹರಡಲಾರಂಭಿಸಿತ್ತು. ಈ ಕುರಿತು ಅಲ್ಲಿನ ಸ್ಥಳೀಯರು ಸಂಪ್ಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದ ಸರ್ಕಲ್ ಇನ್ಸ್‍ಪೆಕ್ಟರ್ ರವಿ.ಬಿ.ಎಸ್ ಅವರು ಮಹಿಳೆಯ ಮೊಬೈಲ್ ಫೋನ್ ಪರಿಶೀಲಿಸಿದ್ದರು. ಆ ವೇಳೆ ಮಹಿಳೆ ಶೇರ್ ಮಾಡಿಕೊಂಡ ಫೋಟೋಗಳು ಅಸಲಿ ಅಲ್ಲ ಎಂಬ ವಿಚಾರ ತಿಳಿದು ಬಂದಿತ್ತು. ಮಹಿಳೆ ಕಳಿಸಿದ ಫೋಟೋಗಳು 2 ವರ್ಷಗಳ ಹಿಂದೆ ಮಲಯಾಳಂ ಮನೋರಮಾ ಪತ್ರಿಕೆಯಲ್ಲಿ ಕೊಟ್ಟಾಯಂನಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿ ಪ್ರಕಟಗೊಂಡಿದ್ದ ಪೊಟೋಗಳಾಗಿವೆ ಎಂಬುವುದನ್ನು ಅವರು ಪತ್ತೆ ಮಾಡಿ, ಆತಂಕದ ವಾತಾವರಣಕ್ಕೆ ತೆರೆ ಎಳೆದಿದ್ದರು. ಡಿವೈಎಸ್‍ಪಿ ಅರುಣ್ ನಾಗೇಗೌಡ, ಸಂಪ್ಯ ಠಾಣಾ ತನಿಖಾ ವಿಭಾಗದ ಎಸ್‍ಐ ಸುಷ್ಮಾ ಭಂಡಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಯೂಟ್ಯೂಟ್ ವೀಡಿಯೋದ ಸ್ಕ್ರೀನ್ ಶಾಟ್ ಪೊಟೋ...!
ಮಾರ್ಗರೇಟ್ ಅವರ ಮೊಬೈಲ್ ಪೋನ್ ಪರಿಶೀಲನೆ ಮಾಡಿದ ವೇಳೆ ಅವರು ಯೂಟ್ಯೂಬ್ ಹೆಚ್ಚಾಗಿ ನೋಡುತ್ತಿರುವುದು, ಅದರಲ್ಲೂ ಕ್ರೈಂ ಸುದ್ದಿಗಳಿಗೆ ಸಂಬಂಧಿಸಿದ ವೀಡಿಯೋಗಳನ್ನೇ ಹೆಚ್ಚಾಗಿ ನೋಡುತ್ತಿರುವುದು ತಿಳಿದು ಬಂದಿತ್ತು. ಮಲಯಾಳಂ ಮನೋರಮಾ ಪತ್ರಿಕೆಯಲ್ಲಿ 2 ವರ್ಷಗಳ ಹಿಂದೆ ಪ್ರಸಾರಗೊಂಡ ವೀಡಿಯೋ ಸ್ಟೋರಿಯೊಂದರ ವಿಡಿಯೋ ದೃಶ್ಯಗಳಿಂದ ಈ ಫೋಟೋಗಳನ್ನು ಸ್ಟ್ರೀನ್‍ಶಾಟ್ ಮೂಲಕ ತೆಗೆದಿರುವ ಮಾರ್ಗರೇಟ್ ಆ ಫೋಟೋವನ್ನು ಮೊದಲಿಗೆ ಮನೆಯ ಮಾಲಿಕನಿಗೆ ಕಳುಹಿಸಿ ಮನೆಗೆ ದರೋಡೆಕೋರರು ಬಂದಿದ್ದಾರೆ ಎಂದು ತಿಳಿಸಿದ್ದರು. ತಕ್ಷಣವೇ ಮನೆಯ ಮಾಲಿಕ ಬಾತೀಷ ಅವರು ಬಾಡಿಗೆ ಮನೆಗೆ ಹೋಗಿ ಪರಿಶೀಲನೆ ನಡೆಸಿದ್ದರು. ಮಾರ್ಗರೇಟ್ ಕಳುಹಿಸಿದ್ದ ಫೋಟೋದ ಮೇಲೆ ಬಾತೀಷ ಅವರಿಗೂ ಸಂಶಯ ಮೂಡಿತ್ತು. ಹಾಗಾಗಿ ಅವರು ಪೊಲೀಸರಿಗೆ ವಿಷಯ ತಿಳಿಸಿದೆ ಸುಮ್ಮನಾಗಿದ್ದರು.
ಈ ಹಿಂದೆಯೊಮ್ಮೆ ಮಾರ್ಗರೇಟ್ ಅವರು ನನಗೆ ಹಾವು ಕಚ್ಚಿದೆ ಎಂದು ಮನೆಯ ಮಾಲಿಕ ಬಾತಿಷಾ ಅವರಿಗೆ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಬಾತಿಷಾ ಅವರ ಮನೆಯವರು ಹೋಗಿ ನೋಡಿದಾಗ ಹಾವು ಕಚ್ಚಿದ ಯಾವುದೇ ಗಾಯದ ಗುರುತುಗಳು ಕಂಡು ಬಂದಿರಲಿಲ್ಲ. ಈ ಹಿನ್ನಲೆಯಲ್ಲಿ ಬಾತಿಷಾ ಅವರು ಮಾರ್ಗರೇಟ್ ತಿಳಿಸಿದ ಚಡ್ಡಿ ಗ್ಯಾಂಗ್ ವಿಚಾರದ ಕುರಿತು ಹೆಚ್ಚು ತಲೆಗೆಡಿಸಿಕೊಂಡಿರಲಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕಾರಣ `ಚಡ್ಡಿ ಗ್ಯಾಂಗ್' ವಿಚಾರ ಗಂಭೀರತೆ ಪಡೆದುಕೊಂಡಿತ್ತು.
ನಿಗೂಢತೆ ಹುಟ್ಟು ಹಾಕಿದ ಕಟ್ಟು ಕಥೆ...!
ಚಡ್ಡಿ ಗ್ಯಾಂಗ್‍ನ ಕಥೆ ಹೆಣೆದ ಮಾರ್ಗರೇಟ್ ಮೂಲತಃ ಕೇರಳ ಮೂಲದವರಾಗಿದ್ದು, ಈಕೆ ತನ್ನ ಪತಿ ಸೈಂಟ್ ಜಾರ್ಜ್ ಹಾಗೂ ಮಗುವಿನೊಂದಿಗೆ ಕೆಯ್ಯೂರು ಗ್ರಾಮದ ಸಣಂಗಳಕ್ಕೆ ಕಳೆದ 40 ದಿನಗಳ ಹಿಂದೆಯಷ್ಟೇ ಬಂದು ಬಾತಿಷಾ ಎಂಬವರಿಗೆ ಸೇರಿದ ಮನೆಯನ್ನು ಬಾಡಿಗೆಗೆ ಪಡೆದುಕೊಂಡು ವಾಸ್ತವ್ಯವಿದ್ದರು. ಜಾರ್ಜ್ ಅವರು ರಬ್ಬರ್ ಟ್ಯಾಪಿಂಗ್ ಹಾಗೂ ರಬ್ಬರ್ ಹಾಲು ಸಂಗ್ರಹಿಸುವ ಕೆಲಸ ಮಾಡುವವರಾಗಿದ್ದಾರೆ. ಮನೆಯಲ್ಲೇ ಇರುತ್ತಿದ್ದ ಮಾರ್ಗರೇಟ್ ಇಂಗ್ಲೀಷ್‍ನಲ್ಲಿ ನಿರರ್ಗಳವಾಗಿ ಮಾತನಾಡ ಬಲ್ಲ ವಿದ್ಯಾವಂತೆಯಾಗಿದ್ದು, ಯಾಕೆ ಹೀಗೆ ಮಾಡಿದಳೆಂಬುವುದು ನಿಗೂಢತೆಯನ್ನು ಹುಟ್ಟು ಹಾಕಿತ್ತು.
ಮಾರ್ಗರೇಟ್ ಹೀಗ್ಯಾಕೆ ಮಾಡಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ ವೇಳೆಯೂ ಮಾರ್ಗರೇಟ್ ಇದೊಂದು ಕಟ್ಟು ಕಥೆ ಎಂಬುದನ್ನು ಹೇಳಲು ಹಿಂದೇಟು ಹಾಕಿದ್ದರು. ನನ್ನ ಮನೆಗೆ ದರೋಡೆಕೋರರು ಬಂದಿದ್ದಾರೆ ಎಂದೇ ವಾದಕ್ಕಿಳಿದು ರಾದ್ಧಾಂತ ಎಬ್ಬಿಸಿದ್ದರು. ಸುದ್ದಿ ಪ್ರಸಾರ ಮಾಡಲು ಸ್ಥಳಕ್ಕೆ ತೆರಳಿದ ಮಾಧ್ಯಮದವರ ಮೇಲೂ ರೇಗಾಡಿದ್ದರು. ನನ್ನ ಅನುಮತಿ ಇಲ್ಲದೆ ವೀಡಿಯೋ ಮಾಡಬಾರದು ಎಂದು ಕ್ಯಾಮರಾ ಎಳೆಯಲು ಮುಂದಾದ ಘಟನೆಯೂ ನಡೆದಿತ್ತು. ಮೊಬೈಲ್ ವಶಕ್ಕೆ ಪಡೆದುಕೊಂಡ ಪೊಲೀಸ್ ರ ಮೇಲೂ ರೇಗಾಡಿದ ಮಾರ್ಗರೇಟ್ ನೀವ್ಯಾರು, ನಿಮ್ಮನ್ಯಾರು ಇಲ್ಲಿಗೆ ಬರಲು ಹೇಳಿದ್ದು, ನನ್ನ ಮೊಬೈಲ್ ಕೊಡಿ, ಇಲ್ಲವಾದರೆ ನಾನು ಕೇರಳ ಪೊಲೀಸ್ ರನ್ನು ಇಲ್ಲಿಗೆ ಕರೆಸುತ್ತೇನೆ ಎಂದು ಇಂಗ್ಲೀಷ್ ಮತ್ತು ಮಲಯಾಳಂ ಭಾಷೆಯಲ್ಲಿ ಗದರಿಸಿದ ಘಟನೆಯೂ ನಡೆದಿತ್ತು.
ಮಾರ್ಗರೇಟ್ ಮನೆಯಲ್ಲಿ ಆಕೆಯನ್ನು ಬಿಟ್ಟರೆ ಪತಿ ಹಾಗೂ ಮಗು ಮಾತ್ರ ಇರುವುದೆಂದು ಹೇಳುತ್ತಿದ್ದಾರೆ. ಆದರೆ ರಾತ್ರಿ ವೇಳೆ ಆ ಮನೆಯಲ್ಲಿ ಹಲವು ಮಂದಿ ಇರುವುದು ಕಂಡು ಬರುತ್ತಿದೆ. ಮನೆಯಲ್ಲಿ ಯಾವುದೋ ರಹಸ್ಯ ಚಟುಚಟಿಕೆ ನಡೆಯುತ್ತಿದೆ ಎಂಬುವುದಕ್ಕೆ ಚಡ್ಡಿ ಗ್ಯಾಂಗ್ ರದ್ಧಾಂತ ಸೃಷ್ಟಿಯೇ ಒಂದು ಸಾಕ್ಷಿಯಾಗಿದ್ದು,ಈ ಕುಟುಂಬದ ಮೇಲೆ ಪೊಲೀಸರು ಕಣ್ಣಿಡಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿತ್ತು.
ಸಂಪೂರ್ಣ ಕಟ್ಟು ಕಥೆ: ಕೆಯ್ಯೂರಿನಲ್ಲಿ ಚಡ್ಡಿ ಗ್ಯಾಂಗಿನಿಂದ ತಲುವಾರು ತೋರಿಸಿ ಬೆದರಿಕೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸುದ್ದಿಯು ಸಂಪೂರ್ಣ ಕಟ್ಟು ಕಥೆಯಾಗಿದೆ. ದ.ಕ.ಜಿಲ್ಲಾ ವ್ಯಾಪ್ತಿಗೆ ಚಡ್ಡಿ ಗ್ಯಾಂಗ್ ದರೋಡೆಕೋರರು ಬಂದಿಲ್ಲ ಎಂದು ಸ್ಪಷ್ಟಪಡಿಸಿರುವ ಪೊಲೀಸರು ಈ ಬಗ್ಗೆ ಯಾರೂ ಭಯ ಪಡುವ ಅಗತ್ಯವಿಲ್ಲ. ಈ ರೀತಿ ಹಳೆಯ ವಿಡಿಯೋಗಳನ್ನು ಅಥವಾ ಪೊಟೋಗಳನ್ನು ಅದರ ಪೂರ್ವಾಪರ ತಿಳಿಯದೆ ಸಾಮಾಜಿಕ ಜಾಲತಾಣಗಳಲ್ಲಿ ಹಚ್ಚಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.