.jpg)
PUTTUR: ಪುತ್ತೂರು ಸರ್ಕಾರಿ ಆಸ್ಪತ್ರೆಯ ಜಾಗದ ಮೇಲೆ ರಾಜ್ಯ ಕಾಂಗ್ರೆಸ್ ಕಣ್ಣು!!
ಪುತ್ತೂರು: ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಜಾಗದ ಮೇಲೆ ರಾಜ್ಯ ಕಾಂಗ್ರೆಸ್ ಕಣ್ಣಿಟ್ಟಿದ್ದು, ಇದಕ್ಕೆ ಶಾಸಕ ಅಶೋಕ್ ಕುಮಾರ್ ರೈ ಸಾಥ್ ನೀಡ್ತಾ ಇದ್ದಾರೆ ಅಂತ ಮಾಜಿ ಶಾಸಕ ಸಂಜೀವ ಮಠಂದೂರು ಗಂಭೀರ ಆರೋಪ ಮಾಡಿದ್ದಾರೆ.
ಪುತ್ತೂರು ಸರ್ಕಾರಿ ಆಸ್ಪತ್ರೆಯನ್ನ ಮೇಲ್ದರ್ಜೆಗೇರಿಸುವ ಮತ್ತು ಹೈಟೆಕ್ ಮಾಡುವ ಕುರಿತು ಅಂದಿನ ಶಾಸಕ ಸಂಜೀವ ಮಠಂದೂರು ಒಂದು ರೂಪುರೇಷ ನಿರ್ಮಿಸಿ, ಆಸ್ಪತ್ರೆಯ ಸುತ್ತಮುತ್ತಲಿರುವ ಜಮೀನನ್ನ ಆಸ್ಪತ್ರೆಯ ಸುಪರ್ದಿಗೆ ಪಡೆದುಕೊಳ್ಳಲು ಇಲಾಖೆಗೆ ನಿರ್ದೇಶನ ನೀಡಿದ್ದರು. ಉಪನೋಂದಣಾಧಿಕಾರಿ ಕಚೇರಿ ಕಟ್ಟಡ, ಹಿಂದಿನ ತಾಲೂಕು ಕಚೇರಿ ಕಟ್ಟಡ, ಅಂಬೇಡ್ಕರ್ ಭವನ ನಿರ್ಮಾಣಕ್ಕೆಂದು ಪಿಡಬ್ಲ್ಯುಡಿ ಬಳಿ ಕಾದಿರಿಸಿದ್ದ 19 ಸೆಂಟ್ಸ್ ಜಾಗವನ್ನೂ ರದ್ದುಗೊಳಿಸಿ ಪುತ್ತೂರು ಸರ್ಕಾರಿ ಆಸ್ಪತ್ರೆಯ ಸುಪರ್ದಿಗೆ ಪಡೆದುಕೊಳ್ಳಲಾಗಿತ್ತು. ಆದ್ರೆ ಸರ್ಕಾರಿ ಆಸ್ಪತ್ರೆಗೆಂದು ಕಾಯ್ದಿರಿಸಿದ 10 ಸೆಂಟ್ಸ್ ಜಮೀನನ್ನ ಕಾಂಗ್ರೆಸ್ ನವರು ಅವರು ಪ್ರೀಯದರ್ಶಿನಿ ಟ್ರಸ್ಟ್ ಹೆಸರಿಗೆ ಮಂಜೂರುಗೊಳಿಸುವ ಕುರಿತ ಪ್ರಸ್ತಾವನೆಯನ್ನ ಮುಂದಿಟ್ಟಿರುವುದಕ್ಕೆ ಬಿಜೆಪಿ ಭಾರೀ ವಿರೋಧ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ವಕ್ಫ್ ಹೆಸರಲ್ಲಿ ಭೂಕಬಳಿಕೆಯ ಆರೋಪ ಕಾಂಗ್ರೆಸ್ ಮೇಲೆ ಇರುವಾಗ್ಲೇ, ಇದೀಗ ಸರ್ಕಾರಿ ಆಸ್ಪತ್ರೆಯ ಜಾಗವನ್ನೇ ಕಾಂಗ್ರೆಸ್ ಸರ್ಕಾರ ಟ್ರಸ್ಟ್ ಒಂದಕ್ಕೆ ಮಂಜೂರುಗೊಳಿಸುವ ಪ್ರಸ್ತಾವನೆ ಭಾರೀ ಚರ್ಚೆಗೆ ಕಾರಣವಾಗಿದೆ. ಇನ್ನು ರಾಜ್ಯ ಸರ್ಕಾರದ ಸುಪರ್ದಿಯಲ್ಲೇ ಭೂಕಬಳಿಕೆಯ ಪ್ಲ್ಯಾನ್ ನಡೀತಾ ಇದೆ ಎಂದು ಬಿಜೆಪಿ ಆರೋಪಿಸಿದೆ.
ಸುಮಾರು 6 ಎಕರೆ ಜಮೀನು ಪುತ್ತೂರು ಸರ್ಕಾರಿ ಆಸ್ಪತ್ರೆಯ ಹೆಸರಲ್ಲಿ ಪಹಣಿಯಾಗಿದೆ. ಇದರಲ್ಲಿ 10 ಸೆಂಟ್ಸ್ ಜಾಗವನ್ನ ಪ್ರೀಯದರ್ಶಿನಿ ಟ್ರಸ್ಟ್ ಗೆ ಮಂಜೂರು ಮಾಡುವ ಕುರಿತು ಪ್ರಸ್ತಾವನೆ ಕಾಂಗ್ರೆಸ್ ಸರ್ಕಾರದಿಂದ ಆಗಿದೆ. ಸ.ನಂ. 131/14ಎ1 ರಲ್ಲಿ 80 ಸೆಂಟ್ಸ್ ಪುತ್ತೂರು ಸಾರ್ವಜನಿಕ ಆಸ್ಪತ್ರೆ ಇದೆ. ಸದ್ಯ ಟ್ರಸ್ಟ್ ಗೆ ಮಂಜೂರು ಮಾಡುವ ಕುರಿತ ದಾಖಲೆಗಳು ಪುತ್ತೂರು ತಹಶೀಲ್ದಾರ್ ಅಂಗಳದಲ್ಲಿದೆ. ಈ ಬಗ್ಗೆ ಇಲಾಖಾ ಅಭಿಪ್ರಾಯ ಕೇಳುವಂತೆ ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿಗೆ ಪಹಣಿ ಹಾಗೂ ನಕ್ಷೆಯ ಪ್ರತಿಯನ್ನ ಲಗತ್ತಿಸಿ ಮಾಹಿತಿಯನ್ನ ತಹಶೀಲ್ದಾರ್ ರವಾನಿಸಿದ್ದಾರೆ. ಇದರಲ್ಲಿ ಶೀಘ್ರವಾಗಿ ಇಲಾಖಾ ಅಭಿಪ್ರಾಯವನ್ನ ಕಚೇರಿಗೆ ಸಲ್ಲಿಸುವಂತೆ ತಹಶೀಲ್ದಾರ್ ಸೂಚಿಸಿದ್ದಾರೆ.
ಸದ್ಯ ಶಾಸಕ ಅಶೋಕ್ ಕುಮಾರ್ ರೈ ಅವರು ಮೆಡಿಕಲ್ ಕಾಲೇಜು ನಿರ್ಮಾಣಬೇಕೆನ್ನುವ ಹಂಬಲದಲ್ಲಿದ್ದಾರೆ. ಆದ್ರೆ ಈ ಮೆಡಿಕಲ್ ಕಾಲೇಜು ಆಗಬೇಕಿದ್ದಲ್ಲಿ ಮೊದಲಿಗೆ ಪುತ್ತೂರಿನಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನ 300 ಬೆಡ್ ನ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು. ಅದು ಬಿಟ್ಟು ಸರ್ಕಾರಿ ಆಸ್ಪತ್ರೆಯನ್ನ ಜಾಗವನ್ನೇ ಖಾಸಗಿ ಪ್ರೀಯದರ್ಶಿನಿ ಟ್ರಸ್ಟ್ ಗೆ ಮಂಜೂರು ಮಾಡಬೇಕೆನ್ನುವ ಪ್ರಸ್ತಾವನೆ ಎಷ್ಟು ಸರಿ ಅನ್ನೋ ಮಾತುಗಳು ಸಾರ್ವಜನಿಕ ವಲಯದಲ್ಲೂ ಕೇಳಿ ಬರುತ್ತಿದೆ. ಇದಕ್ಕೆ ಬಿಜೆಪಿ ಕೂಡ ಭಾರೀ ವಿರೋಧ ವ್ಯಕ್ತಪಡಿಸಿದ್ದು, ಒಂದು ವೇಳೆ ಖಾಸಗಿ ಟ್ರಸ್ಟ್ ಗೆ ಸರ್ಕಾರಿ ಆಸ್ಪತ್ರೆಯ ಜಮೀನನ್ನ ನೀಡಿದ್ದಲ್ಲಿ ಕರಾವಳಿಯ ಎಲ್ಲಾ ಬಿಜೆಪಿ ಶಾಸಕರು, ವಿಧಾನ ಪರಿಷತ್ ಸದಸ್ಯರನ್ನ ಸೇರಿಸಿ ಪುತ್ತೂರಿನಲ್ಲಿ ಹೋರಾಟ ಮಾಡಲಾಗುವುದು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.