ಸಣ್ಣದೊಂದು ನಿರ್ಲಕ್ಷ್ಯದಿಂದ ಸಣಕಲು ಯುವಕನ ಕೈಲಿ ಬಲಿಯಾದ ಜಯಂತ ರೈ..!
Wednesday, November 27, 2024
ನಂಬಿಕೆ ಅನ್ನೋದು ಒಂದೊಮ್ಮೆ ನಮ್ಮ ಜೀವವನ್ನೇ ಬಲಿ ಪಡೆಯಬಹುದು ಅನ್ನೋದಿಕ್ಕೆ ಪುತ್ತೂರಿನಲ್ಲಿ ಕಳೆದ ಮುವತ್ತು ವರ್ಷಗಳ ಹಿಂದೆ ನಡೆದ ಆ ಒಂದು ಘಟನೆ ಸಾಕ್ಷಿ. ವರ್ಷಗಳ ಬಳಿಕ ಊರಿಗೆ ಬಂದ ಯುವಕನೊಬ್ಬ ನಂಬಿಕಸ್ತನಾಗಿ ಓಡಾಡಿ ಅನ್ನ ಹಾಕಿದವನಿಗೆ ಗುಂಡು ಹಾರಿಸಿದ್ದ ಘಟನೆ ಅದು. ಅನುಮಾನವಿದ್ರೂ ಅವನಿಂದೇನಾದಿತೂ ಎಂಬ ನಿರ್ಲಕ್ಷ್ಯವೋ ಅಥವಾ ತನ್ನ ಜೊತೆಗಿದ್ದವರ ಮೇಲಿನ ಅತಿಯಾದ ಆತ್ಮವಿಶ್ವಾಸವೋ ಅಂದು ನಡೆಯಬಾರದ್ದು ನಡೆದು ಹೋಗಿತ್ತು. ಪುತ್ತೂರಿನಲ್ಲಿ ನಿಂತು ಹೋಗಿದ್ದ ಕಂಬಳವನ್ನು ಆರಂಭಿಸಿ, ದೊಡ್ಡದೊಂದು ಅಭಿಮಾನಿ ಬಳಗವನ್ನೇ ಕಟ್ಟಿಕೊಂಡಿದ್ದ ಜಯಂತ ರೈ ಅಂದು ಸಣಕಲು ದೇಹದ ಯುವಕ ಹಾರಿಸಿದ್ದ ಗುಂಡಿಗೆ ಬಲಿಯಾಗಿದ್ದರು.
30 ವರ್ಷಗಳ ಹಿಂದೆ ಪುತ್ತೂರಿನಲ್ಲಿತ್ತು ಜಯಂತ್ ರೈ ಹವಾ...!
70-80 ರ ದಶಕದಲ್ಲಿ ಪುತ್ತೂರಿನಲ್ಲಿ ಲೆಕ್ಕವಿಲ್ಲದಷ್ಟು ಗ್ಯಾಂಗ್ ವಾರ್ಗಳು ನಡೆದಿತ್ತು ಅನ್ನೋದು ಈಗ ಇತಿಹಾಸ. ಉಪ್ಪಿನಂಗಡಿಯ ಪದವಿ ಕಾಲೇಜಿನಲ್ಲಿ 1982-83 ರ ಸಮಯದಲ್ಲಿ ಕಾಲೇಜ್ ಡೇ ಸಂದರ್ಭದಲ್ಲಿ ಆರಂಭಗೊಂಡ ವಿದ್ಯಾರ್ಥಿಗಳ ನಡುವಿನ ಹೊಡೆದಾಟ ಪುತ್ತೂರಿನ ರಕ್ತ ಸಿಕ್ತ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದು ಸುಳ್ಳಲ್ಲ. ಕಾಲೇಜು ಗಲಾಟೆಯನ್ನು ಪುತ್ತೂರಿನ ಪೆಟ್ಟಿಸ್ಟ್ ಗ್ಯಾಂಗ್ ಬಳಿ ಒಯ್ದಲ್ಲಿಂದ ಪುತ್ತೂರಿನಲ್ಲಿ ಗ್ಯಾಂಗ್ ವಾರ್ ಆರಂಭವಾಗಿತ್ತು. ಒಂದು ಕಡೆ ಬೊಳುವಾರ್ ಗ್ಯಾಂಗ್ ಮತ್ತೊಂದು ಕಡೆ ನೆಲ್ಲಿಕಟ್ಟೆ ಗ್ಯಾಂಗ್ ಎಂಬ ಎರಡು ಗ್ಯಾಂಗ್ಗಳು ಹುಟ್ಟಿಕೊಂಡಿದ್ದೇ ಇಲ್ಲಿಂದ. ಈ ಗ್ಯಾಂಗ್ ಗಲಾಟೆಯಲ್ಲಿ ಸ್ನೇಹಿತರು ಶತ್ರುಗಳಾಗಿದ್ರೆ, ಕಲ್ಲಾರೆಯ ಅಣ್ಣ ತಮ್ಮಂದಿರೂ ಒಬ್ಬರನ್ನೊಬ್ಬರು ಕೊಲ್ಲುವ ಹಂತಕ್ಕೆ ಹೋಗಿದ್ದರು. ಅಷ್ಟೇ ಅಲ್ಲದೆ ಒಬ್ಬನ ಕೊಲೆಯಾದ್ರೆ ಮತ್ತೊಬ್ಬ ಕೆಲ ವರ್ಷಗಳ ಹಿಂದೆ ಜೀವಾಂತ್ಯಗೊಳಿಸಿದ್ದ. ಇಂತಹ ಹತ್ತಾರು ಘಟನೆಗಳು ಅಂದಿನ ಗ್ಯಾಂಗ್ ವಾರ್ನಲ್ಲಿ ನಡೆದಿತ್ತು. ಈ ಗ್ಯಾಂಗ್ವಾರ್ಗಳ ಸಮಯದಲ್ಲೇ ಡಾನ್ ಆಗಿ ಬೆಳೆದವರು ದಿವಂಗತ ಉದ್ಯಮಿ ಮುತ್ತಪ್ಪ ರೈ. ಮುತ್ತಪ್ಪ ರೈ ಬೆಂಗಳೂರು ಸೇರಿಕೊಂಡಿದ್ರೂ ಅವರ ಆಪ್ತವಲಯದಲ್ಲಿದ್ದ ಜಯಂತ ರೈ ಪುತ್ತೂರು ಹಾಗೂ ಮಂಗಳೂರಿನಲ್ಲಿ ತನ್ನ ಹವಾ ಇಟ್ಟಕೊಂಡಿದ್ದ ನವ ಯುವಕ. ಇದಿಷ್ಟೇ ಅಲ್ಲದೆ ಪುತ್ತೂರಿನ ಗ್ಯಾಂಗ್ ವಾರ್ ಒಂದು ಹಂತದಲ್ಲಿ ಕಡಿಮೆ ಆಗಲೂ ಜಯಂತ ರೈ ಪ್ರಭಾವ ಕೂಡಾ ಕಾರಣವಾಗಿತ್ತು. ತನ್ನ ಸುತ್ತ ಯುವಕರ ತಂಡವನ್ನೇ ಕಟ್ಟಿಕೊಂಡು ಓಡಾಡುತ್ತಿದ್ದ ಜಯಂತ ರೈ ಸುಖಾಸುಮ್ಮನೆ ಯಾರಿಗೂ ತೊಂದರೆ ಕೊಟ್ಟ ವ್ಯಕ್ತಿಯಲ್ಲ. ಹಾಗಂತ ತನ್ನ ತಂಟೆಗೆ ಬಂದವರನ್ನೂ ಸುಮ್ಮನೆ ಬಿಟ್ಟ ವ್ಯಕ್ತಿಯೂ ಅಲ್ಲ. ಆದ್ರೆ ಅಂತಹ ವ್ಯಕ್ತಿ ತೋರಿದ ಅದೊಂದು ನಿರ್ಲಕ್ಷ್ಯ ಅವರ ಜೀವವನ್ನೇ ತೆಗೆದ ಬಿಟ್ಟಿತ್ತು.
ಅಮಾಯಕನಂತೆ ಜಯಂತ ರೈ ಜೊತೆ ಸೇರಿದ್ದ ಹಂತಕ...!
ಜಯಂತ ರೈ ಬಳಿ ಸಮಸ್ಯೆಗಳನ್ನು ಹೇಳಿಕೊಂಡು , ಜಾಗದ ತಕರಾರು ಹೇಳಿಕೊಂಡು ಹಾಗೂ ಜೀವನಕ್ಕೆನಾದ್ರೂ ದಾರಿ ಮಾಡಿಕೊಡಿ ಅಂತ ಕೇಳಿಕೊಂಡು ಬರುವವರಿಗೆ ಏನು ಕಡಿಮೆ ಇರಲಿಲ್ಲ. ಹಾಗಂತ ತನ್ನಿಂದ ಆಗಿದ್ದನ್ನು ಮಾಡುವ ಸಹಾಯ ಗುಣ ಜಯಂತ ರೈ ಅವರಲ್ಲಿ ಇತ್ತು ಅನ್ನೋದು ಸುಳ್ಳಲ್ಲ. ಹಾಗೆ ಅವರ ಬಳಿ ಬಂದು ಸೇರಿಕೊಂಡು ಅಂದಿನ ತ್ರಿವೇಣಿ ಹೊಟೇಲ್ನಲ್ಲಿ ತಿಂದುಂಡುಕೊಂಡು ಇದ್ದ ಹುಡುಗನೇ ತನ್ನ ಜೀವದ ಮೇಲೆ ಕಣ್ಣಿಟ್ಟಿದ್ದಾನೆ ಅಂತ ಜಯಂತ ರೈ ಅಂದುಕೊಂಡಿರಲಿಲ್ಲ. ಇನ್ನು ಪುತ್ತೂರಿನದೇ ಈ ಹುಡುಗ ಈ ಹಿಂದೆ ಮರೀಲ್ನ ಕಪಾಟು ಇಂಡಸ್ಟ್ರಿ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಅನ್ನೋ ಮಾಹಿತಿ ಜಯಂತ ರೈ ಕಲೆ ಹಾಕಿಕೊಂಡಿದ್ದರು. ತಾನಿದ್ದ ಬಿಲ್ಡಿಂಗ್ ಮಾಲೀಕ ಹಾಗೂ ನೆಲ್ಲಿಕಟ್ಟೆ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ ಮುತ್ತಪ್ಪ ರೈ ಆಪ್ತ ಡಾಲ್ಫೀ ರೇಗೋ ಅವರ ಸಹೋದರನ ಇಂಡಸ್ಟ್ರಿ ಅದು. ಹೀಗಾಗಿ ಯುವಕನನ್ನು ಅನಾಯಾಸವಾಗಿ ನಂಬಿದ್ದರು ಜಯಂತ ರೈ. ಹಾಗಂತ ಆರಂಭದಲ್ಲಿ ಆತನನ್ನು ಜಯಂತ ರೈ ಜೊತೆಗೆ ಇದ್ದವರು ಪರೀಕ್ಷೆ ಮಾಡ್ತಾ ಇದ್ರಾದ್ರೂ ನಿಧಾನವಾಗಿ ಆತನ ಮೇಲೆ ವಿಶ್ವಾಸ ಬೆಳೆಸಿಕೊಂಡಿದ್ರು. ಆದ್ರೆ ಆತ ತಾನು ಮಾಡಿಕೊಂಡು ಬಂದಿದ್ದ ಪ್ಲ್ಯಾನ್ ಪ್ರಕಾರ ಅಂದು ಕೆಲಸ ಮುಗಿಸಿ ಬಿಟ್ಟಿದ್ದ.
ಚುನಾವಣೆಯ ಗಡಿಬಿಡಿಯ ವೇಳೆ ಕಾಂಗ್ರೆಸ್ ಕಚೇರಿಯಲ್ಲೇ ಹಾರಿತು ಗುಂಡು..!
1994 ರ ನವೆಂಬರ್ 26 ಹಾಗೂ ಡಿಸೆಂಬರ್ 1 ರಂದು ಕರ್ನಾಟಕ ವಿಧಾನಸಭೆಗೆ ಎರಡು ಹಂತದ ಚುನಾವಣೆ ನಡೆದಿತ್ತು. ಪುತ್ತೂರಿನಲ್ಲಿ ಬಿಜೆಪಿಯಿಂದ ಡಿ.ವಿ.ಸದಾನಂದ ಗೌಡರು ಬಿಜೆಪಿಯಿಂದ ಹಾಗೂ ವಿನಯಕುಮಾರ್ ಸೊರಕೆ ಕಾಂಗ್ರೆಸ್ನಿಂದ ಎರಡನೇ ಭಾರಿ ಆಯ್ಕೆ ಬಯಸಿ ಕಣಕ್ಕಿಳಿದಿದ್ದರು. ಎರಡೂ ಪಕ್ಷಗಳ ನಡುವೆ ತೀವ್ರ ಪೈಪೋಟಿ ಇದ್ದ ಕಾರಣ ಜಯಂತ ರೈ ನಿತ್ಯ ಕಾಂಗ್ರೆಸ್ ಕಚೇರಿಗೆ ಬಂದು ಪ್ರಚಾರದ ರಣತಂತ್ರ ರೂಪಿಸ್ತಾ ಇದ್ರು. ಯಾರು ಎಲ್ಲಿ ಹೋಗಬೇಕು ಹೇಗೆ ಪ್ರಚಾರ ಕೈಗೊಳ್ಳಬೇಕು ಎಲ್ಲವೂ ಜಯಂತ ರೈ ಅವರ ಅಣತಿಯಂತೆ ನಡಿತಾ ಇತ್ತು. ಮತದಾನ ಪ್ರಚಾರ ಮುಗಿಯಲು ಇನ್ನು ಕೆಲ ದಿನ ಮಾತ್ರ ಉಳಿದಿರುವಂತೆ ಜಯಂತ ರೈ ಫುಲ್ ಬ್ಯುಸಿಯಾಗಿದ್ರು. ಅದೊಂದು ದಿನ ಮುಂಜಾನೆ ಬೇಗನೆ ಬಂದಿದ್ದ ಜಯಂತ ರೈ ತ್ರಿವೇಣಿ ಹೊಟೇಲ್ನಲ್ಲಿಯೇ ಹಂತಕನಿಗೆ ಊಟಕ್ಕೆ ಹಣ ನೀಡಿ ಇಂದು ಜೊತೆಗೆ ಬರಬೇಡ ಅಂದಿದ್ದರು. ಹಾಗೆ ಹೇಳಿದವರೇ ಬಸ್ ನಿಲ್ದಾಣದ ಬಳಿ ಇರುವ ಕಾಂಗ್ರೆಸ್ ಕಚೇರಿಗೆ ಬಂದು ಎಂದಿನಂತೆ ತಮ್ಮ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ರು. ಆದ್ರೆ ಅಂದು ಜಿಲ್ಲೆಯ ಘಟನಾನುಘಟಿಗಳು ಪುತ್ತೂರಿಗೆ ಆಗಮಿಸಲಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಚೇರಿ ಕೂಡಾ ಕಾರ್ಯಕರ್ತರಿಂದ ಫುಲ್ ರಶ್ ಆಗಿತ್ತು. ಇದೇ ಸಮಯಕ್ಕೆ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದ ಆ ಹಂತಕ ಸಮೀಪದಿಂದಲೇ ಜಯಂತ ರೈ ಅವರ ತಲೆಗೆ ಗುರಿ ಇಟ್ಟಿದ್ದ. ಕೊನೆಯ ಕ್ಷಣದಲ್ಲಿ ಇದನ್ನು ಅರಿತ ಜಯಂತ ರೈ ತಲೆ ಬಗ್ಗಿಸಿದರಾದ್ರೂ ಗುಂಡು ಅವರ ತಲೆಯ ಹಿಂಭಾಗದ ಚಿಪ್ಪನ್ನೇ ಕಿತ್ತುಕೊಂಡು ಹೋಗಿತ್ತು.
ವಿಶ್ವಾಸಗಳಿಸಿ ಡಾನ್ಗಳು ಕೊಟ್ಟ ಕೆಲಸ ಮುಗಿಸಿದ್ದ ಸುನಿಲ್ ಡಿಸೋಜಾ..!
ಪುತ್ತೂರಿನ ಮರೀಲ್ ನಿವಾಸಿಯಾಗಿದ್ದ ಸುನಿಲ್ ಡಿಸೋಜಾ ಬಡ ಕುಟುಂಬದಿಂದ ಬಂದವನಾಗಿದ್ದ. ಆದ್ರೆ ಹೆಕ್ಟರ್ ಅವರ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವಾಗಲೇ ಬಪ್ಪಳಿಗೆ ಮೂಲದ ರೌಡಿ ಶೀಟರ್ ಒಬ್ಬನ ಸಂಪರ್ಕ ಬೆಳೆಸಿಕೊಂಡಿದ್ದ. ಆತನೇ ಸುನೀಲ್ ಡಿಸೋಜಾನನ್ನು ಜಯಂತ ರೈ ಅವರ ವಿರೋಧಿ ಪಾಳಯಕ್ಕೆ ಪರಿಚಯಿಸಿದ್ದ. ಅದೇ ಡಾನ್ ಗಳು ಸುನಿಲ್ನನ್ನು ದಾಳವಾಗಿ ಬಳಸಿಕೊಂಡು ಜಯಂತ ರೈ ಕಥೆ ಮುಗಿಸಿದ್ದರು. ಸುನಿಲ್ ಒಂದಷ್ಟು ದಿನ ಪುತ್ತೂರಿನಿಂದ ನಾಪತ್ತೆಯಾಗಿದ್ದ. ಆದ್ರೆ ಆತನ ನಾಪತ್ತೆಯ ಹಿಂದೆ ಆತನ ಪಿಸ್ತೂಲ್ ಟ್ರೈನಿಂಗ್ ಕಥೆ ಇತ್ತು ಅನ್ನೋದು ಆ ಬಳಿಕ ಗೊತ್ತಾಗಿತ್ತು. ಹಾಗೆ ಬಂದಿದ್ದ ಆತ ಹಿಂದಿನಂತೆ ಹಲವರ ಜೊತೆ ಮಾತನಾಡಿಕೊಂಡು ಓಡಾಡಿಕೊಂಡಿದ್ದನಾದ್ರೂ ಜಯಂತ್ ರೈ ಅವರ ಕಥೆ ಮುಗಿಸೋದಿಕ್ಕೆ ಹೊಂಚು ಹಾಕಿದ್ದ ಅನ್ನೋದು ಯಾರಿಗೂ ಅನುಮಾನ ಬಂದಿರಲಿಲ್ಲ. ಹಾಗಂತ ಹಣದ ಆಸೆಗೆ ಬಲಿಯಾಗಿ ಜಯಂತ್ ರೈ ಅವರ ಅಧ್ಯಾಯ ಮುಗಿಸಿದ್ದ ಸುನಿಲ್ ರಿವೇಂಜ್ಗೆ ಬಲಿಯಾದ ಅನ್ನೋದು ಬೇರೆ ಹೇಳಬೇಕಾಗಿಲ್ಲ. ಚುನಾವಣೆಯ ಸಂದರ್ಭದಲ್ಲೇ ನಡೆದ ಈ ಘಟನೆ ಇಡಿ ಪುತ್ತೂರು ಮಾತ್ರವಲ್ಲದೆ ಅಂಡರ್ ವರ್ಲ್ಡ್ನಲ್ಲೇ ಸಂಚಲನ ಮೂಡಿಸಿತ್ತು. ಮಂಗಳೂರಿನ ಆಸ್ಪತ್ರೆಯಲ್ಲಿ ಚುನಾವಣೆ ಮುಗಿಯುವ ತನಕ ಚಿಕಿತ್ಸೆ ಪಡೆದಿದ್ದ ಜಯಂತ ರೈ ಇಹಲೋಕ ತ್ಯಜಿಸಿದರು.
ಜಯಂತ ರೈ ಅಂತ್ಯದೊಂದಿಗೆ ಪುತ್ತೂರಿನ ಚುನಾವಣಾ ಫಲಿತಾಂಶ ಕೂಡಾ ಬುಡಮೇಲಾಗಿತ್ತು. ವಿನಯಕುಮಾರ್ ಸೊರಕೆ ಕೇವಲ 404 ಮತಗಳ ಅಂತರದಲ್ಲಿ ಸೋತಿದ್ದರು. ಆದರೆ ಆ ಸೋಲಿಗಿಂತಲೂ ಉತ್ತಮ ಯುವ ನಾಯಕನನ್ನು ಕಳೆದುಕೊಂಡ ಶೋಕ ಕಾಂಗ್ರೆಸ್ ಹಾಗೂ ಜಯಂತ್ ರೈ ಅಭಿಮಾನಿಗಳಿಗಾಗಿತ್ತು. ಜಯಂತ ರೈ ಇಲ್ಲದೆ 30 ವರ್ಷಗಳಾದ್ರೂ ಅವರ ಅಭಿಮಾನಿಗಳು ಇಂದಿಗೂ ಅವರನ್ನು ನೆನಪಿಸ್ತಾರೆ ಅಂದ್ರೆ ಅವರ ವ್ಯಕ್ತಿತ್ವ ಹೇಗಿತ್ತು ಅಂತ ಯೋಚಿಸಬೇಕಾಗಿದ್ದೆ.