
ಬಂಟ್ವಾಳ: ಮತದಾನ ಜಾಗೃತಿ ಮೂಲಕ ಗಮನ ಸೆಳೆದಿದ್ದ ಸನ್ನಿಧಿಯ ಮುಂದಿದೆ ಇನ್ನಷ್ಟು ಜಾಗೃತಿ ಯೋಜನೆಗಳು!
ಬಂಟ್ವಾಳ: ತನ್ನ 8 ರ ಹರೆಯದಲ್ಲೇ ಮತದಾನ ಜಾಗೃತಿ ನಡೆಸುವ ಮೂಲಕ ಸುದ್ದಿಯಾಗಿದ್ದ
ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕಶೆಕೋಡಿಯ ಸನ್ನಿಧಿ ಕುರಿತ ಸ್ಪೆಷಲ್ ರಿಪೋರ್ಟ್‌ವೊಂದು ಇಲ್ಲಿದೆ
ನೋಡಿ. ಎಳೆಯ ಪ್ರಾಯದಲ್ಲೇ ಸಾಮಾಜಿಕ ಕಾಳಜಿಯನ್ನು ಹೊಂದಿರುವ ಸನ್ನಿಧಿ ಇತ್ತೀಚೆಗೆ ಆರೋಗ್ಯ ಜಾಗೃತಿ,
ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ಮನೆ ಮನೆಗೆ ತೆರಳಿ ಪರಿಸರ ಸ್ನೇಹಿ ಗಣಪನ ಆರಾಧನೆಗೆ ಒತ್ತು ನೀಡುವಂತೆ
ಕೇಳಿಕೊಂಡಿದ್ದರು. ಮುಂದೆಯೂ ಹಲವು ರೀತಿಯ ಚಟುವಟಿಕೆ ಮೂಲಕ ತನ್ನ ಜಾಗೃತಿ ಜಾಥಾದಿಂದ ಸಮಾಜದ ಸ್ವಾಸ್ಥ್ಯ
ಕಾಪಾಡುವ ಅಭಿಲಾಷೆಯನ್ನು ಸನ್ನಿಧಿ ಹೊಂದಿದ್ದಾರೆ.
6 ಭಾಷೆಗಳಲ್ಲಿ ಮತದಾನ ಜಾಗೃತಿ!
ಸನ್ನಿಧಿ ಮೊದಲ ಬಾರಿಗೆ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭ ಬಂಟ್ವಾಳ ತಾಲೂಕಿನ ಹಲವೆಡೆ ಮನೆ, ಅಂಗಡಿಗಳಿಗೆ ತೆರಳಿ ಕಡ್ಡಾಯವಾಗಿ ಮತದಾನ ಮಾಡುವಂತೆ ಕೇಳಿಕೊಂಡಿದ್ದಳು. ಪುಟಾಣಿಯ ಈ ಕಾರ್ಯಕ್ಕೆ ಭಾರೀ ಶ್ಲಾಘನೆಯೂ ವ್ಯಕ್ತವಾಗಿತ್ತು. ಸ್ವತಃ ಜಿಲ್ಲಾಧಿಕಾರಿಗಳು ಕೂಡಾ ಸನ್ನಿಧಿ ಬೆನ್ನು ತಟ್ಟಿದ್ದರು. ಅಷ್ಟೇ ಅಲ್ಲ, ರಾಜ್ಯ ಚುನಾವಣಾ ಆಯೋಗವು ಈಕೆಯ ಈ ಕಾಳಜಿಗೆ ಪ್ರಶಂಸೆ ವ್ಯಕ್ತಪಡಿಸಿತ್ತು.
ಇನ್ನು ಈ ಋತುವಿನಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಸನ್ನಿಧಿ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿ ಮತದಾನ ಜಾಗೃತಿಯಲ್ಲಿ ತೊಡಗಿಸಿದ್ದರು. ಸನ್ನಿಧಿ ಕಶೆಕೋಡಿ ತನ್ನ ತಂಡದೊಂದಿಗೆ ತೆರಳಿ 2 ದಿನಗಳ ಕಾಲ ಮತದಾನ ಜಾಗೃತಿಯಲ್ಲಿ ಭಾಗವಹಿಸಿದ್ದರು. ಇಷ್ಟೇ ಅಲ್ಲ ಕೇರಳ, ಗೋವಾ ರಾಜ್ಯಗಳಲ್ಲೂ ಸನ್ನಿಧಿ ಕಶೆಕೋಡಿ ಮತದಾನ ಜಾಗೃತಿಯಲ್ಲಿ ಭಾಗವಹಿಸಿ ಮತದಾರರನ್ನು ಭೇಟಿಯಾಗಿ ಮತದಾನದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದ್ದಾರೆ.
10 ರ ಹರೆಯದ ಸನ್ನಿಧಿ ಕಶೆಕೋಡಿ ಕನ್ನಡ, ತುಳು ಅಷ್ಟೇ ಅಲ್ಲದೇ ಮಲಯಾಳಂ,
ಇಂಗ್ಲೀಷ್, ಹಿಂದಿ ಹಾಗೂ ಕೊಂಕಣಿ ಹೀಗೆ 6 ಭಾಷೆಗಳಲ್ಲಿ ಮತದಾನ ಜಾಗೃತಿ ನಡೆಸಿದ್ದಾರೆ. ಉಳಿದಂತೆ
ತುಳು, ಕನ್ನಡ ಭಾಷೆಗಳಲ್ಲಿ ಆರೋಗ್ಯ ಜಾಗೃತಿ, ಪರಿಸರ ಸ್ನೇಹಿ ಹಬ್ಬ ಆಚರಣೆ ಕುರಿತಂತೆಯೂ ಜಾಗೃತಿ
ಮೂಡಿಸಿದ್ದಾರೆ.
ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕಶೆಕೋಡಿಯ ಲೋಕೇಶ್ ಗೌಡ ಮತ್ತು
ಶೀಲಾವತಿ ದಂಪತಿಗಳ ಪುತ್ರಿಯಾಗಿರುವ ಸನ್ನಿಧಿ ಅವರು ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ
ಶಾಲೆಯ 5 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾರೆ. ಅವರ ಈ ಸೇವಾ ಮನೋಭಾವವನ್ನು ಮೆಚ್ಚಿ ಕೇಂದ್ರ ಹಾಗೂ
ರಾಜ್ಯ ಚುನಾವಣಾ ಆಯೋಗವು ಶ್ಲಾಘಿಸಿ ಮೆಚ್ಚುಗೆ ಪತ್ರಗಳನ್ನು ನೀಡಿದೆ. ವಿಧಾನಸಭೆ ಸ್ಪೀಕರ್ ಯುಟಿ
ಖಾದರ್, ಗೃಹ ಸಚಿವ ಪರಮೇಶ್ವರ್, ಕೇಂದ್ರ ಸಚಿವ ವಿ. ಸೋಮಣ್ಣ ಸಹಿತ ಹಲವು ಮಂದಿ ಜನಪ್ರತಿನಿಧಿಗಳು
ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಸಹಿತ ಹಲವು ಕೆಎಎಸ್, ಐಎಎಸ್ ಅಧಿಕಾರಿಗಳು
ಅಭಿನಂದಿಸಿದ್ದಾರೆ. ಗೈಡ್ಸ್ ವಿದ್ಯಾರ್ಥಿನಿ ಆಗಿರುವ ಸನ್ನಿಧಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳೆರಡರಲ್ಲೂ
ಉತ್ತಮ ಸಾಧನೆ ಹೊಂದಿದ್ದಾರೆ. ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದವೂ
ಈಕೆಯ ಜೊತೆಗಿದ್ದು ಸದಾ ಪ್ರೋತ್ಸಾಹ ನೀಡುತ್ತಾ ಬಂದಿದೆ.
ಮುಂದಿನ ಯೋಜನೆಗಳೇನು?
ಸನ್ನಿಧಿ ಕಶೆಕೋಡಿ ಮುಂದಿನ ದಿನಗಳಲ್ಲಿ ಸ್ವಚ್ಚತೆ, ಪರಿಸರ ಹಾಗೂ ನೀರಿನ
ಸಂರಕ್ಷಣೆ ಹೀಗೆ ಹಲವು ಬಗೆಯ ಜಾಗೃತಿಯನ್ನು ಜನರಲ್ಲಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು
ನಡೆಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಒಟ್ಟಿನಲಿ ಬಾಲ್ಯದಲ್ಲೇ ಸಮಾಜದ ಆಗುಹೋಗುಗಳಿಗೆ ಸ್ಪಂದಿಸಿ
ಆ ಮೂಲಕ ಸ್ವಸ್ಥ ರಾಷ್ಟ್ರ ನಿರ್ಮಿಸುವ ಕನಸು ಹೊತ್ತಿರುವ ಈ ಬಾಲೆಯ ವಿಶಿಷ್ಟ ಪ್ರಯತ್ನಕ್ಕೆ ನಮ್ಮ
ಕಡೆಯಿಂದಲೂ ಆಲ್ ದಿ ಬೆಸ್ಟ್.