-->
ಇನ್ನೂ ಮರೆಯಾಗಿಲ್ಲ 'ಆಟಿ ಕಳೆಂಜ'

ಇನ್ನೂ ಮರೆಯಾಗಿಲ್ಲ 'ಆಟಿ ಕಳೆಂಜ'

 


 -ಸುಪ್ರೀತಾ ಸಾಲ್ಯಾನ್

ಕಲೆ, ಸಂಸ್ಕೃತಿಗಳ ಆಗರವಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಎಷ್ಟೇ ಆಧುನಿಕತೆಯತ್ತ ಸಾಗುತ್ತಿದ್ದರೂ, ಇಲ್ಲಿನ ಶ್ರೀಮಂತ ಆಚರಣೆಗಳನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಇದಕ್ಕೆ ಸಾಕ್ಷಿ ಕರಾವಳಿಯ ಕೆಲ ಹಳ್ಳಿಗಳು. ಹೌದು ಅಪರೂಪದಲ್ಲಿ ಅಪರೂಪವೆನಿಸಿದ ಆಷಾಢ ಮಾಸದ ಅತಿಥಿ ಆಟಿ ಕಳೆಂಜ ಇಲ್ಲಿ ಇನ್ನೂ ಮರೆಯಾಗಿಲ್ಲ. ಅಪಾಢ ಬಂತೆಂದರೆ ಸಾಕು ಭಾಗದ ನಲಿಕೆ ಸಮುದಾಯದವರು ತಲತಲಾಂತದಿಂದ ಆಚರಣೆಯಲ್ಲಿರುವ ಜನಪದ ಕಲೆ ಪ್ರದರ್ಶನ ಆರಂಭಿಸುತ್ತಾರೆ.

ಆಷಾಢ ಮಾಸದಲ್ಲಿ ಹಳ್ಳಿಗಳಲ್ಲಿ ಜನರು ಆಟಿ ಕಳೆಂಜನನ್ನು ಎದುರು ನೋಡುತ್ತಿರುತ್ತಾರೆ. ಜನಪದ ಕಲಾಪ್ರಕಾರಗಳಲ್ಲಿ ಒಂದಾಗಿರುವ ಆಟಿ ಕಳೆಂಜ ಗಗ್ಗರದ ಶಬ್ದ, ತೆಂಬರೆಯ ನಿನಾದ ಜೊತೆಗೆ ಪಾಡ್ಡನ ರಾಗದೊಂದಿಗೆ ಕರಾವಳಿಯ ಮನೆಮನೆಗೆ ಭೇಟಿ ಕೊಟ್ಟು ನೃತ್ಯ ಮಾಡುತ್ತಾನೆ. ಆಷಾಢವನ್ನು ತುಳುವಿನಲ್ಲಿ ಆಟಿ ತಿಂಗಳು ಎನ್ನುತ್ತಾರೆ. ಎಡೆಬಿಡದೇ ತಿಂಗಳಲ್ಲಿ ಮಳೆ ಸುರಿಯುವುದರಿಂದ ಕೃಷಿ ಚಟುವಟಿಕೆಗೆ ಹಳ್ಳಿಗಳಲ್ಲಿ ಸ್ವಲ್ಪ ವಿರಾಮ ದೊರೆಯುತ್ತದೆ. ಸಂದರ್ಭ ಕರಾವಳಿಗರು ಕಟ್ಟಿಕೊಂಡ ಜನಪದ ಕಲಾ ಪ್ರಕಾರವೇ ಆಟಿ ಕಳೆಂಜ, ಸಾಮಾನ್ಯವಾಗಿ ಭೂತ ನರ್ತನ ಮಾಡುವ ಪರವ, ಪಂಬದ ಮತ್ತು ನಲಿಕೆ ಎನ್ನುವ ಮೂರು ಸಮುದಾಯದವರಲ್ಲಿ ನಲಿಕೆ ಸಮುದಾಯದವರು ಮಾತ್ರ ಆಟಿ ಕಳಂಜನ ವೇಷ ಹಾಕುತ್ತಾರೆ. ವೇಷ ಹಾಕುವುದೆಂದರೆ ಅದು ಸುಲಭದ ಮಾತಲ್ಪ ಜಾನಪದ ಕಲೆಗೆ ಅದರದ್ದೇ ಆದ ವಿಧಿ ವಿಧಾನಗಳಿದೆ. ಮನೆಯ ದೈವ ದೇವರುಗಳಿಗೆ ಕೈ ಮುಗಿದು, ಕಾರ್ಯವು ಯಾವುದೇ ವಿಘ್ನಗಳು ಬಾರದಂತೆ ನೆರವೇರಲಿ ಎಂದು ಬೇಡುತ್ತಾ, ಮನೆಯ ಹಿರಿಯರ ಆಶೀರ್ವಾದ ಪಡೆದು ಬಣ್ಣಕ್ಕೆ ಕೂರುತ್ತಾರೆ. ಮಂಗಳೂರಿನಿಂದ ಪುತ್ತೂರು ವ್ಯಾಪ್ತಿಯಲ್ಲಿ ಆಟಿಕಳಂಜನ ವೇಷ ಹಾಕುವರನ್ನು ನಲಿಕೆಯವರು ಎಂದು ಕರೆದರೆ, ಉಡುಪಿಯಿಂದ ಮಂಗಳೂರು ವ್ಯಾಪ್ತಿಯಲ್ಲಿ ಬರುವ ಜನರು ಇವರನ್ನು ಪಾಣರರೆಂದು ಕರೆಯುತ್ತಾರೆ. ಇನ್ನೂ ಕೊಡಗು. ಸುಳ್ಯದಲ್ಲಿ ಆಟಿ ಕಳೆಂಜನ ವೇಷ ತೊಡುವವರನ್ನು ಅಜಿಲರೆಂದು ಹೇಳುತ್ತಾರೆ.

ಆಟಿ ಕಳೆಂಜನ ವೇಷ ಭೂಷಣಗಳು, ಉಡುಗೆ ತೊಡುಗೆ ನೋಡಲು ಆಕರ್ಷಣೀಯವಾಗಿರುತ್ತದೆ. ಕರಾವಳಿಯ ಮನೆಮನೆಗೆ ಬರುವ ಆಟಿ ಕಳೆಂಜನ ಕಾಲಿನಲ್ಲಿ ಗೆಜ್ಜೆ ಇರುತ್ತದೆ. ಕೆಂಪು ಬಿಳಿ ಬಣ್ಣದ ವಸ್ತ್ರವನ್ನು ಧರಿಸಿರುತ್ತಾನೆ. ಕೈಯ ತೋಳಿಗೆ ಕೇಪಳಹೂವಿನ ದಂಡೆ, ಮುಖಕ್ಕೆ ಕೆಂಪು ಬಿಳಿ ಬಣ್ಣವನ್ನು ಹಚ್ಚಿ ಅಲಂಕಾರ ಮಾಡುತ್ತಾನೆ. ತಲೆಯ ಮೇಲೆ ತೆಂಗಿನ ಸಿರಿಯಿಂದ ಮಾಡಿದ ಶಿರಸ್ತಾನವನ್ನು ಧರಿಸಿ, ಕೈಯಲ್ಲಿ ತೆಂಗಿನ ಮರದ ಗರಿಯಿಂದ ಮಾಡಿದ ಛತ್ರಿಯನ್ನು ಹಿಡಿದು ತಿರುಗಿಸುತ್ತಾ ಹಿಮ್ಮೇಳದಲ್ಲಿರುವ ವ್ಯಕ್ತಿಯ ತೆಂಬರೆಯ ಸದ್ದಿಗೆ ಹೆಜ್ಜೆ ಹಾಕುತ್ತಾ ನೋಡುಗರ ಮನಸ್ಸಿಗೆ ಮುದ ನೀಡುತ್ತಾನೆ. ಅಡು ಭಾಷೆಯಲ್ಲಿ ಆಟಿ ಕಳೆಂಜನ ಎಲ್ಲ ವೇಷ ಭೂಷಣವನ್ನು ಪುಂಡಯಿ, ತರೆಮುಡಿ, ಗುಬೈ, ಇಜಾರ್, ಕೆಬಿ ಒಲಿ, ತಿಗಲೆ ಚವರಿ ರೀತಿಯಾಗಿ ಹೇಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ಆಧುನಿಕ ವೈದ್ಯ ಲೋಕಕ್ಕೆ ಯಾವುದೂ ಸವಾಲಲ್ಲ. ಆದರೆ ಒಂದು ಕಾಲದಲ್ಲಿ ಪ್ರಕೃತಿಯಲ್ಲಿ ಸಿಗುವ ಗಿಡ, ಮರ, ಬಳ್ಳಿಗಳೇ ಜನರ ರೋಗ ರುಜಿನಗಳನ್ನು ದೂರ ಮಾಡಲು ಆಧಾರವಾಗಿದ್ದವು. ಅಷಾಢ ಮಾಸದಲ್ಲಿ ಮಳೆ ಹೆಚ್ಚಿರುವುದರಿಂದ ರೋಗ ರುಜಿನಗಳು ಕೂಡ ಅತಿಯಾಗಿ ಜನರನ್ನು ಕಾಡುತ್ತಿತ್ತು. ಆಗ ಆಷಾಢದಲ್ಲಿ ಬರುವ ಆಟಿ ಕಳೆಂಜ ಮನೆ ಮನೆಗೆ ತೆರಳಿ ಗಿಡ ಮೂಲಿಕೆಗಳಿಂದ ತಯಾರಿಸಿದ ಮನೆ ಮದ್ದುಗಳನ್ನು ನೀಡಿ ಜನರ ರೋಗ ರುಜಿನಗಳನ್ನು ದೂರ ಮಾಡುತ್ತಿದ್ದನಂತೆ. ಆಟಿ ಕಳೆಂಜ ಮನೆಗೆ ಬಂದು ಹರಸಿದರೆ ರೋಗಗಳಿಂದ ಭಯ ಭೀತರಾಗಿದ್ದ ಜನರಿಗೆ ತುಸು ಮಾನಸಿಕ ನೆಮ್ಮದಿ, ಧೈರ್ಯ ಬರುತ್ತಿತ್ತು ಎಂಬ ಬಲವಾದ ನಂಬಿಕೆ ತುಳುವರದು.

ಆಷಾಢ ಮಾಸದಲ್ಲಿ ಆಟ ಕಳೆಂಜ ಮೂವತ್ತು ದಿನವು ಊರು ಸುತ್ತುವುದಿಲ್ಲ. 16 ದಿನಗಳು ಮಾತ್ರ ತಿರುಗಾಟ ನಡೆಸುತ್ತಾನೆ. ಊರೂರು ಸುತ್ತಿ ಗದ್ದೆ, ತೋಟ, ದನ, ಕರುಗಳಿಗೆ ತಟ್ಟಿದ ಮಾರಿಯನ್ನು ಕಳೆಯುವ ಆಟಿ ಕಳೆಂಜನಿಗೆ ಮನೆ ಮನೆಯಲ್ಲಿ ಭತ್ತ, ಅರಸಿನ, ಉಪ್ಪು, ತೆಂಗಿನಕಾಯಿ, ಹುಳಿ, ಮೆಣಸು ಮುಂತಾದ ದಿನ ಉಪಯೋಗಿ ವಸ್ತುಗಳನ್ನು ಮನೆಯ ಮಹಾಲಕ್ಷ್ಮೀ ದಾನವಾಗಿ ನೀಡುತ್ತಾಳೆ. ಆಟ ತಿಂಗಳ ಕೊನೆಯಲ್ಲಿ ಆಟಿ ಕಳೆಂಜ ಮನೆಯ ಮನೆಯ ಮಾರಿ ಕಳೆದು, ಊರಿನ ಎಲ್ಲಾ ಕಷ್ಟಗಳು ದೂರವಾಗಿ ಏಳು ಕಡಲಿನ ಆಚೆ ಬೀಳಲಿ ಎಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿ ಮರೆಯಾಗುತ್ತಾನೆ



Ads on article

Advertise in articles 1

advertising articles 2

Advertise under the article