ಚಿಂದಿ ಚಿತ್ರಾನ್ನವಾದ ಪುತ್ತೂರು-ಉಪ್ಪಿನಂಗಡಿ ರಸ್ತೆ!!
ಪುತ್ತೂರು: ದಿನವೊಂದಕ್ಕೆ ನೂರಾರು ವಾಹನಗಳು ಓಡಾಟ ನಡೆಸುತ್ತಿರುವ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಅಭಿವೃದ್ಧಿಯ ಕನಸಿಗೆ ಹಲವಾರು ವರ್ಷಗಳ ಇತಿಹಾಸವಿದೆ. ಈ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸುವ ಯೋಚನೆಯನ್ನು ಹಲವು ಶಾಸಕರು ಮಾಡಿದ್ದಾರೆ. ಸುಮಾರು 13 ಕಿಮೀ ವ್ಯಾಪ್ತಿಯ ಪುತ್ತೂರು -ಉಪ್ಪಿನಂಗಡಿ ರಸ್ತೆಯಲ್ಲಿ ಬೇರಿಕೆಯಿಂದ ಶಾಂತಿನಗರದ ತನಕ ಮಳೆಗಾಲದ ಮೊದಲು ಷತುಷ್ಪಥ ಕಾಮಗಾರಿ ನಡೆಸಲಾಗಿದ್ದು, ಮಳೆಗಾಲದ ವರುಣನ ಅಬ್ಬರಕ್ಕೆ ಸಿಲುಕಿರುವ ರೂ.12 ಕೋಟಿ ವೆಚ್ಚದ ಈ ನೂತನ ಚತುಷ್ಪಥ ಕಾಮಗಾರಿ `ಚಿಂದಿ'ಯಾಗುತ್ತಿದೆ.
ಪುತ್ತೂರು -ಉಪ್ಪಿನಂಗಡಿ ರಸ್ತೆಯಲ್ಲಿ ಮೂರು ಹಂತಗಳಲ್ಲಿ ಚತುಷ್ಪಥ ಕಾಮಗಾರಿ ನಡೆಸಲಾಗಿದೆ. ಪುತ್ತೂರಿನ ಹಾರಾಡಿಯಿಂದ ಪಡೀಲ್ ತನಕದ ಚತುಷ್ಪಥ ಕಾಮಗಾರಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಅವರ ಶಾಸಕತ್ವದ ಅವಧಿಯಲ್ಲಿ ನಡೆಸಲಾಯಿತು. ಅಲ್ಲಿಂದ ಮುಂದೆ ಕೇಪುಳಿನಿಂದ ಕೆಮ್ಮಾಯಿ ತನಕದ ಷತುಷ್ಪಥ ರಸ್ತೆಯನ್ನು ರೂ.4.15 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಇದರ ಜತೆಗೆ ಸೇಡಿಯಾಪುನಿಂದ ಕೋಡಿಂಬಾಡಿ ತನಕದ 1 ಕಿಮೀ ರಸ್ತೆಯನ್ನು ಇದೇ ಹಣದಲ್ಲಿ ಷತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸಲಾಯಿತು. ಕೋಡಿಂಬಾಡಿಯಿಂದ ಮಠಂತಬೆಟ್ಟು ತನಕದ ರಸ್ತೆಯನ್ನು `ದ್ವಿಪಥ' ರಸ್ತೆಯನ್ನಾಗಿಸುವ ಕೆಲಸ ರೂ.2.20 ಕೋಟಿಯಲ್ಲಿ ಶಕುಂತಳಾ ಶೆಟ್ಟಿ ಅವರ ಅವಧಿಯಲ್ಲಿ ನಡೆದಿದೆ.
ಬಳಿಕ ಶಾಸಕರಾದ ಸಂಜೀವ ಮಠಂದೂರು ಅವಧಿಯಲ್ಲಿ ಮಠಂತಬೆಟ್ಟು ಎಂಬಲ್ಲಿಂದ ಶಾಂತಿನಗರ ನೆಕ್ಕಿಲಾಡಿಯ ಪೆಟ್ರೋಲ್ ಪಂಪ್ ತನಕ ರೂ.12 ಕೋಟಿ ವೆಚ್ಚದಲ್ಲಿ ಕಾಮಗಾರಿ ಟೆಂಡರ್ ಪ್ರಕ್ರಿಯೆ ನಡೆದು ಆರಂಭವಾಯಿತು. ಆದರೆ ಈ ಕಾಮಗಾರಿ ಪೂರ್ಣಗೊಳ್ಳುವ ಮೊದಲು ಸರ್ಕಾರ ಬದಲಾವಣೆಗೊಂಡಿತು. ಹಾಗಾಗಿ ಕಾಮಗಾರಿ ಅಪೂರ್ಣಗೊಂಡಿತು. ಉಳಿಕೆಯಾದ ಕಾಮಗಾರಿ ಈಗಿನ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಬೇರಿಕೆಯಿಂದ ಶಾಂತಿನಗರದ ತನಕ ಚತುಷ್ಪಥ ಕಾಮಗಾರಿ ನಡೆಯಿತು. ಮಳೆಗಾಲಕ್ಕೆ ಸ್ವಲ್ಪವೇ ಮೊದಲು ತರಾತುರಿಯಲ್ಲಿ ನಡೆಸಿದ ಈ ಕಾಮಗಾರಿ ಇದೀಗ ವರುಣನ ಅಬ್ಬರಕ್ಕೆ ಸಿಲುಕಿ ಕುಲಗೆಟ್ಟು ಹೋಗಿದೆ. ಹಸಿ ಮಣ್ಣಿನ ಮೇಲೆ ಡಾಮಾರು ಹಾಕಿದ ಪರಿಣಾಮ ಮಳೆಗಾಲದ ನೀರಿಗೆ ಬಹುತೇಕ ಕಡೆಗಳಲ್ಲಿ ಹೊಂಡ ಗುಂಡಿಗಳದ್ದೇ ದರ್ಬಾರು. ಬೇರಿಕೆಯಲ್ಲಿ ಚಿಂದಿಯಾಗಲು ಆರಂಭಿಸಿದ ಈ ಕಾಮಗಾರಿ ಶಾಂತಿನಗರದ ತನಕವೂ ಸಂಪೂರ್ಣ ಹಾಳಾಗಿದೆ. ಕೆಲವು ಕಡೆಗಳಲ್ಲಿ ಡಾಮಾರೇ ಕಾಣುತ್ತಿಲ್ಲ. ಕೆಲ ಭಾಗದಲ್ಲಿ ಡಾಮಾರು ಕಿತ್ತು ಹೋಗಿ ಕೆಸರುಮಣ್ಣಿನ ರಾಶಿ ನಿರ್ಮಾಣವಾಗಿದೆ. ಈ ಮಳೆಗಾಲದ ಅಬ್ಬರಕ್ಕೆ ಈ 12 ಕೋಟಿಯಲ್ಲಿ ಒಂದಷ್ಟು ಕೋಟಿ ಮಳೆ ನೀರಿನೊಂದಿಗೆ ಹರಿದುಹೋಗುವಂತೆ ಕಾಣುತ್ತಿದೆ. ಶಾಂತಿನಗರದಿಂದ ನೆಕ್ಕಿಲಾಡಿ ಪೆಟ್ರೋಲ್ ಪಂಪ್ ತನಕದ ಕಾಮಗಾರಿ ಇನ್ನೂ ಮುಗಿದಿಲ್ಲ. ಮಳೆಗಾಲಕ್ಕೆ ಮೊದಲು ರಸ್ತೆ ಸುವ್ಯವಸ್ಥೆಯ ದೃಷ್ಟಿಯಿಂದ ತರಾತುರಿಯಲ್ಲಿ ನಿರ್ಮಿಸಲಾದ ಚತುಷ್ಪಥ ಈಗ ವಾಹನ ಸವಾರರಿಗೆ ಸವಾಲಾಗಿ ಪರಿವರ್ತಿತವಾಗಿದೆ. ಗುತ್ತಿಗೆದಾರರಿಗೂ ಈ ಚತುಷ್ಪಥ ರಸ್ತೆಯನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲಾಗಿದೆ.
ಮತ್ತೆ 20 ಕೋಟಿ- ಪೂರ್ಣ ಪ್ರಮಾಣದ ಚತುಷ್ಪಥ:
ಪುತ್ತೂರು-ಉಪ್ಪಿನಂಗಡಿ ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ಚತುಷ್ಪಥ ಮಾಡಲು ಪಣ ತೊಟ್ಟಿರುವ ಪುತ್ತೂರು ಶಾಸಕ ಅಶೋಕ್ ರೈ ಅವರು ಇದೀಗ ಚತುಷ್ಪಥ ಬಾಕಿಯಾಗಿರುವ ಈ ರಸ್ತೆಯ ಭಾಗಗಳಿಗೆ ಮತ್ತೆ ರೂ.20 ಕೋಟಿ ಅನುದಾನ ತರುವ ಮೂಲಕ ರಸ್ತೆಯ ಅಭಿವೃದ್ಧಿಗೆ ಮುಂದಾಗಿದ್ದಾರೆ. ಪ್ರಸ್ತುತ ಬೊಳುವಾರಿನಿಂದ ಹಾರಾಡಿ ತನಕ ಚತುಷ್ಪಥ ರಸ್ತೆ ಮಾಡಬೇಕಾಗಿದೆ. ಆದರೆ ಬೊಳುವಾರು ಸಮೀಪ ರೈಲ್ವೇ ಹಳಿ ಹಾದುಹೋಗುವ ಕಾರಣ ಇಲ್ಲಿ ಚತುಷ್ಪಥ ರಸ್ತೆ ಮಾಡುವುದು ಕಷ್ಟಸಾಧ್ಯವಾದ ಹಿನ್ನಲೆಯಲ್ಲಿ ಇಲ್ಲಿ ಸುಮಾರು 300 ಮೀಟರ್ ಬಿಟ್ಟು ಹಾರಾಡಿ ತನಕದ ರಸ್ತೆ ಚತುಷ್ಪಥವಾಗಲಿದೆ. ಕೋಡಿಂಬಾಡಿಯಿಂದ ಮಠಂತಬೆಟ್ಟು ತನಕದ ದ್ವಿಪಥ ರಸ್ತೆಯೂ ಈ ಬಾರಿ ಚತುಷ್ಪಥ ರಸ್ತೆಯಾಗಿ ಬದಲಾಗಲಿದೆ. ಜತೆಗೆ ನೆಕ್ಕಿಲಾಡಿಯ ಪೆಟ್ರೋಲ್ ಪಂಪು ಬಳಿಯಿಂದ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ತನಕ ಪುತ್ತೂರು ಉಪ್ಪಿನಂಗಡಿ ರಸ್ತೆಯನ್ನು ಚತುಷ್ಪಥಗೊಳಿಸುವ ಕಾರ್ಯ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಗುತ್ತಿಗೆದಾರರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ.
ವರದಿ: ಮೇಘಾ ಪಾಲೆತ್ತಾಡಿ
