-->
ಸ್ಥಿತಿವಂತನಾದರೂ ಸಾಮಾನ್ಯನಂತೆ ಬದುಕಿ, ಪರಲೋಕದೆಡೆಗೆ ಸಾಗಿದ ನೌಶಾದ್ ಹಾಜಿ

ಸ್ಥಿತಿವಂತನಾದರೂ ಸಾಮಾನ್ಯನಂತೆ ಬದುಕಿ, ಪರಲೋಕದೆಡೆಗೆ ಸಾಗಿದ ನೌಶಾದ್ ಹಾಜಿ

ಮಂಗಳೂರು: ಉದ್ಯಮಿ ಸೂರಲ್ಪಾಡಿಯ ನೌಶಾದ್ ಹಾಜಿ ತನ್ನ ನಲ್ವತ್ತರ ಹರೆಯದಲ್ಲೇ ಇಹಲೋಕ ತ್ಯಜಿಸಿದ್ದಾರೆ. ಜನವರಿ 1 ರಂದು ನಡೆದ ಅಪಘಾತದಲ್ಲಿ ನೌಶಾದ್ ಹಾಜಿ ಮರಣವನ್ನಪ್ಪಿದ್ದಾರೆ. ಭಾನುವಾರ ರಾತ್ರಿ ನಡೆದ ಅವರ ಅಂತಿಮ ಕಾರ್ಯಕ್ಕೆ ಸಾವಿರಾರು ಮಂದಿ ಸಾಕ್ಷಿಯಾಗಿದ್ದರು. ಅವರ ಜೊತೆಗೆ ಚಾಲಕನಾಗಿದ್ದ ಯುವಕ ಮುಶ್ರಫ್ ಕೂಡಾ ನೌಶಾದ್ ಹಾಜಿ ಅವರ ಜೊತೆಗೆ ಹಿಂತಿರುಗಿ ಬಾರದ ಲೋಕದ ಕಡೆಗೆ ಪಯಣ ಬೆಳೆಸಿದ್ದಾರೆ.

ನಂಡೇ ಪೆಂಗಳ್ (ನನ್ನ ತಂಗಿ) ಅನ್ನೋ ವಿಶಿಷ್ಟ ಕಾರ್ಯಕ್ರಮದ ರೂವಾರಿ ನೌಶಾದ್ ಹಾಜಿ ಆಗಿದ್ದರು. ಬಡಬಗ್ಗರಿಗೆ ದಾನ ನೀಡುವುದರಲ್ಲಿ ಇವರದ್ದು ಎತ್ತಿದ ಕೈ. ಹಿರಿಯರನ್ನು ಕಂಡರೆಷ್ಟು ಗೌರವವೋ, ಕಿರಿಯರನ್ನು ಕಂಡಾಗಲೂ ಅಷ್ಟೇ ಪ್ರೀತಿಯಿಂದ ಮಾತನಾಡಿಸುತ್ತಿದ್ದ ವ್ಯಕ್ತಿಯಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಮಟ್ಟಿಗೆ ಸೂರಲ್ಪಾಡಿ ನೌಶಾದ್ ಹಾಜಿ ಅವರನ್ನು ಮೀರಿಯೂ ಆದಾಯ, ಆಸ್ತಿ ಸಂಪಾದಿಸಿರುವ ನೂರಾರು ಮುಸ್ಲಿಂ ಉದ್ಯಮಿಗಳಿದ್ದಾರೆ. ಆದರೆ ಅವರ್ಯಾರೂ ನೌಶಾದ್ ಹಾಜಿಯಂತೆ ಜನರ ಪ್ರೀತಿಯ ಆಸ್ತಿ ಗಳಿಸಿಲ್ಲ. 30 ವರ್ಷ ದಾಟಿದ ಹೆಣ್ಣುಮಕ್ಕಳ ಮದುವೆ ಮಾಡಿಸಲು ನೌಶಾದ್ ಹಾಜಿ ಮತ್ತವರ ತಂಡ ಮಾಡಿದ ಪ್ರಯತ್ನ ಅಮೋಘವಾದುದು. ಈ ನೌಶಾದ್ ಹಾಜಿ ಬಡವರ ಸೇವೆಯಲ್ಲಿ ಸಂತೃಪ್ತಿ ಕಂಡವರು. ಕೋವಿಡ್ ಸಮಯದಲ್ಲಿ ಅವರು ತೋರಿದ ನಿಸ್ವಾರ್ಥ ಸೇವೆಯ ಬಗ್ಗೆ ನೌಶಾದ್ ಹಾಜಿ ಜೊತೆ ಒಡನಾಟದಲ್ಲಿದ್ದ ಸಾಮಾಜಿಕ ಕಾರ್ಯಕರ್ತ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಮುಂದಾಳು ಮೊಹಮ್ಮದ್ ಇಮ್ರಾನ್ ಅಡ್ಡೂರು ಅವರು ಹಂಚಿಕೊಂಡ ಅಭಿಪ್ರಾಯವಿದು.

ಮರ್ಹೂಂನೌಷಾದ್ ಹಾಜಿಯ ಇನ್ನೋವ ಕಾರು ಸಮುದಾಯಕ್ಕೆ ಓಡಿದಷ್ಟು ಅವರ ಕುಟುಂಬಕ್ಕೂ ಓಡಿರಲಿಲ್ಲವೇನೋ!?

ಸ್ವಂತ ಎರಡು ಕಾರು ಇದ್ದರೂ ಚಲಾಯಿಸಲು ಗೊತ್ತಿಲ್ಲದ ಮುಗ್ದರಾಗಿದ್ದರು ಹಾಜಾರ್ (ನೌಶಾದ್ ಹಾಜಿ). ಹಲವು ವರ್ಷ ಹಲವು ಚಾಲಕರನ್ನೂ  ಇಟ್ಟು ಸಮುದಾಯ, ಸಮಾಜಕ್ಕೆ ಸ್ಪಂದಿಸುತ್ತಿದ್ದರು. ಸಮದ್ ಅರಳ  9 ವರ್ಷ ಚಾಲಕರಾಗಿ ಸೇವೆ ಸಲ್ಲಿಸಿದ್ದರು. ಕೋವಿಡ್ ಸಮಯದಲ್ಲಿ ನಾನು ಹಾಜಾರೊಂದಿಗೆ ಆದರ್ಶ್ ಆಸಿಫ್ ಸೂರಲ್ಪಾಡಿ  ಅವರ ಜೊತೆಗೂಡಿ ಜಿಲ್ಲೆಯ ಮೂಲೆ ಮೂಲೆಗೆ ಪ್ರತಿದಿನ ಇನ್ನೋವ ಕಾರಲ್ಲಿ ರೇಷನ್ ಇಟ್ಟುಕೊಂಡು ಹಳ್ಳಿ ಹಳ್ಳಿಗೆ ಬಡವರ ಮನೆ ಬಾಗಿಲಿಗೆ ಹೋಗುತ್ತಿದ್ದೆವು. ಸ್ವತಃ ಹಾಜಾರ್ ಅವರೇ ಕಿಟ್ ಗಳನ್ನು ಹೊತ್ತುಕೊಂಡು ನಡೆಯುತ್ತಿದ್ದರು. ಕಾರು ಹೋಗದ ಪ್ರದೇಶಗಳಿಗೆ ಕಿಲೋಮೀಟರ್ ನಡೆದು ಗುಡ್ಡ ಪ್ರದೇಶಗಳಿಗೆ ಹೊತ್ತುಕೊಂಡು ಹೋದದ್ದೂ ಉಂಟು.

ರೇಷನ್ ಕಿಟ್ ಹೊತ್ತು ಬಡವರ ಮನೆ ಮುಂದೆ ನೌಶಾದ್ ಹಾಜಿ

ನೌಶಾದ್ ಹಾಜಿಯ ನಗುಮುಖವೇ ಪಾಸ್ ಆಗಿತ್ತು! 

ಹಾಜಾರ್ ಇನ್ನೋವಾ ಕಾರಿಗೆ ಯಾವುದೇ ಪಾಸ್ ಇರಲಿಲ್ಲ. ಅವರ ಹೆಸರೇ ಎಲ್ಲಾ ಚೆಕ್ ಪಾಯಿಂಟಿಗೆ ಪಾಸ್ ಆಗಿತ್ತು. ಪೋಲೀಸರು ಕಾರಿನಲ್ಲಿದ್ದ ರೇಷನ್ ಕಂಡು ನಗು ಮುಖದಿಂದ ಕಳುಹಿಸಿಕೊಡುತ್ತಿದ್ದರು. ಇಷ್ಟು ಮಾತ್ರವಲ್ಲ ನೌಶಾದ್ ಹಾಜಾರ್ ಅವರ ಮನೆಯಂಗಳದಲ್ಲಿಯೂ ರೇಷನ್ ಕಿಟ್ ಗಳು ತುಂಬಿದ್ದವು. ಅದನ್ನ ಪಡೆಯಲೆಂದೇ ಬಡವರ ದಂಡೇ ಬರುತ್ತಿತ್ತು.

ನೌಶಾದ್ ಹಾಜಿ ಜೊತೆಗೆ ಇಮ್ರಾನ್ ಅಡ್ಡೂರು

ಸ್ಥಳೀಯ ಗುರುಪುರ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು‌. ಪ್ರತೀ ವರ್ಷ ರಂಝಾನ್ ತಿಂಗಳಲ್ಲಿ ತನ್ನ ರೇಂಜಿನ ಮದರಸ ಮಸೀದಿಯಲ್ಲಿ  ಕಾರ್ಯನಿರ್ವಹಿಸುವ ಉಸ್ತಾದರಿಗೆ ತಿಂಗಳ ರೇಷನ್ನೀಡುತ್ತಿದ್ದರು. ಅದರಲ್ಲೂ ಕೋವಿಡ್ ಸಂಧರ್ಭದಲ್ಲಿ ಝಕರಿಯಾ ಜೋಕಟ್ಟೆಯವರ ಸಹಕಾರದಿಂದ ಕಿಟ್ ಕೊಡಿಸಿದ್ದರು.

ನೌಶಾದ್ ಹಾಜಿ (ಎಡ) ಮತ್ತು ಅವರ ಅಂತಿಮ ದರ್ಶನಕ್ಕೆ ಸೇರಿದ್ದ ಜನಸ್ತೋಮ (ಬಲ) 

ಕಾರು ನೀಡಿ ಬಸ್ ನಲ್ಲಿ ಹೋಗುತ್ತಿದ್ದರು!

ಆಲಿಮರು (ಧಾರ್ಮಿಕ ವಿದ್ವಾಂಸರು), ಉಸ್ತಾದರು ಎಂದರೆ ಅವರಿಗೆ ಪಂಚಪ್ರಾಣ.‌ ಆಲಿಮರಿಗೂ ಅವರು ಎಂದರೆ ಅಷ್ಟೇ ಪ್ರೀತಿ. ಪ್ರತಿಯೊಂದು ಉಸ್ತಾದರು ತಮ್ಮ ಕಷ್ಟ, ನೋವುಗಳನ್ನು ಹಾಜಾರ್ ಬಳಿ ಬಂದು ತೋರ್ಪಡಿಸುತ್ತಿದ್ದರು. ನಾಳೆ ನನಗೆ ಏನಿದೆ ಎಂದು ಒಂದು ನಿಮಿಷವು ಚಿಂತಿಸದೆ ತನ್ನಲ್ಲಿರುವುದನ್ನು ಕೊಟ್ಟು ಸಂತೈಸುತ್ತಿದ್ದರು. ಕೋವಿಡ್ ಸಮಯದಲ್ಲಿ ಸಮುದಾಯದ ಬಡವರರು ಹೆಚ್ಚಿರುವ ಬೆಳ್ತಂಗಡಿ ಭಾಗದ ಮೂಲೆ ಮೂಲೆಗೆ ತೆರಳಿ ಕಿಟ್ ಹಂಚಿದ್ದರು. ತಾನೇ ಕಿಟ್ ಗಳನ್ನ ಹೊತ್ತು ಬಡವರ ಮನೆಗೆ ಹೊತ್ತು ಸಾಗುತ್ತಿದ್ದರು. ಶಾಸಕರ ಮನೆಗೆ ಅಷ್ಟು ಜನ ಬರ್ತಿದ್ದರೋ ಗೊತ್ತಿಲ್ಲ, ಆದ್ರೆ ದಿನ ಬೆಳಿಗಾದರೆ ಸಾಕು ಹಿಂದೂ, ಮುಸ್ಲಿಂ, ಕ್ರೈಸ್ತರೆನ್ನದೇ ಎಲ್ಲ ಜಾತಿ, ಧರ್ಮದವರು ಬರುತ್ತಿದ್ದರು. ಬಡವರ ಮದುವೆಗೆ ಮದುಮಗ/ ಮದುಮಗಳನ್ನ ಕರೆದೊಯ್ಯಲು ತನ್ನ ಸ್ವಂತ ಕಾರು ನೀಡುತ್ತಿದ್ದ ಹಾಜಾರ್, ತಾನು ಮಾತ್ರ ಬಸ್ ಹತ್ತಿ ಕಾರ್ಯಕ್ರಮಗಳಿಗೆ ಹೋಗಿದ್ದಿದೆ. ಹೀಗೆ ಶುಭ ಕಾರ್ಯಗಳಿಗೆ ಕಾರು ನೀಡುವಾಗಲೂ ಅಷ್ಟೇ ಪೆಟ್ರೋಲ್, ಡೀಸೆಲ್ ಹಣವನ್ನ ಹಾಜಾರ್ ಅವರೇ ನೀಡುತ್ತಿದ್ದರು.

ನೌಶಾದ್ ಹಾಜಿ ಅವರ ಸ್ವಂತ ಕಾರಿನಲ್ಲಿ ರೇಷನ್ ಕಿಟ್ 


ಬೈಕ್ ಹಿಂಬದಿ ಸವಾರನಾಗಿ ನೌಶಾದ್ ಹಾಜಿ

ಮನೆಯ ಚಿನ್ನಾಭರಣವನ್ನೇ ನೀಡಿದ ಸಹೃದಯಿ!

ಮದುವೆಗೆ ಚಿನ್ನಾಭರಣ ಆಗಿಲ್ಲ ಎಂದು ಅಳುತ್ತಾ ಬಂದಿದ್ದ ಬಡ ಹೆಣ್ಮಗಳೊಬ್ಬಳ ಕುಟುಂಬಕ್ಕೆ ತನ್ನ ಮನೆಯಲ್ಲಿದ್ದ ಚಿನ್ನಾಭರಣವನ್ನೇ ನೀಡಿ ಕಳುಹಿಸಿದ್ದ ಸಹೃದಯಿ ಅವರು. ಹೀಗೆ ಹಲವು ಸಮಸ್ಯೆಗಳನ್ನು ಹೇಳಿಕೊಂಡು ಸಮುದಾಯ ಅವರ ಮನೆಗೆ ಬರುತ್ತಿತ್ತು. ಅವರು ಕೊಟ್ಟ ಪ್ರೀತಿಗೆ ನಾವು ಸೋತಿದ್ದೇವೆ. ಮರ್ಹೂಂನೌಷಾದ್ ಹಾಜಿಗೆ ನೌಷಾದ್ ಹಾಜಿಯೇ ಸರಿಸಾಟಿ ಎಂದು ಇಮ್ರಾನ್ ಅಡ್ಡೂರು ಅವರ ಜೊತೆಗಿದ್ದ ದಿನಗಳನ್ನ ‘ದಿ ನ್ಯೂಸ್ ಅವರ್‘ ಜೊತೆ ಹಂಚಿಕೊಂಡಿದ್ದಾರೆ.


Ads on article

Advertise in articles 1

advertising articles 2

Advertise under the article