MANGALORE: ನಾಳೆ SDPI ಪಕ್ಷದ ಪ್ರಥಮ ಪಟ್ಟಿ ಬಿಡುಗಡೆ!
ಮಂಗಳೂರು: ರಾಜ್ಯ ಚುನಾವಣಾ ರಣಕಣ ರಂಗೇರುತ್ತಿದೆ. ಹೌದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಪಕ್ಷ ಈ ಬಾರಿಯ ವಿಧಾನಸಭಾ ಚುನಾವಣೆಗೆ ಎಲ್ಲರಿಗಿಂತಲೂ ಮೊದಲು ತೊಡೆ ತಟ್ಟಿ ನಿಂತಿದೆ. ಹಾಗಾಗಿಯೇ ಎಸ್ ಡಿಪಿಐ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಫೈನಲ್ ಮಾಡಿದ್ದು, ನಾಳೆ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನ ಘೋಷಣೆ ಮಾಡಲಿದ್ದಾರೆ.
ರಾಜ್ಯದ ಸುಮಾರು 100 ಕ್ಷೇತ್ರಗಳಲ್ಲಿ ಈ ಬಾರಿ ಎಸ್ ಡಿಪಿಐ ಸ್ಪರ್ಧೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಇದರಲ್ಲಿ ದ.ಕ. ಜಿಲ್ಲೆಯ 8 ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನ ಸ್ಪರ್ಧೆಗಿಳಿಸಲಿದ್ದಾರೆ. ಅಚ್ಚರಿ ಎಂದರೆ ಯು.ಟಿ.ಖಾದರ್ ಗೆ ಸವಾಲೊಡ್ಡಲು ಎಸ್ ಡಿಪಿಐಯ ಪ್ರಬಲ ಅಭ್ಯರ್ಥಿಯೆಂದೇ ಗುರಿತಿಸಲ್ಪಟ್ಟ ರಿಯಾಝ್ ಫರಂಗಿಪೇಟೆ ರೆಡಿಯಾಗಿದ್ದಾರೆ.
ಮಂಗಳೂರು ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಎದುರಾಗಲಿದೆ. ಇದರಲ್ಲಿ ಖಾದರ್ ಗೆ ರಿಯಾಝ್ ಫರಂಗಿಪೇಟೆ ಮುಳ್ಳಾಗಿಯೂ ಪರಿಣಮಿಸಬಹುದು. ಜೊತೆಗೆ ಯು.ಟಿ.ಖಾದರ್ ಗೆ ಎರಡೂ ಸಮುದಾಯದ ಬೆಂಬಲವೂ ಇದೆ. ಇದರ ನಡುವೆ ಎಸ್ ಡಿಪಿಐ ಪಕ್ಷ ಮತವನ್ನ ಇಬ್ಭಾಗ ಮಾಡಿದ್ದಲ್ಲಿ ಇದರಿಂದ ಆ ಭಾಗದ ಬಿಜೆಪಿಯ ಅಭ್ಯರ್ಥಿ ಎಷ್ಟು ಲಾಭಗಳಿಸಬಹುದು ಅನ್ನೋದು ಕೂಡ ಒಂದು ಪ್ರಶ್ನೆ.
ಇನ್ನುಳಿದಂತೆ ಬಂಟ್ವಾಳದಲ್ಲಿ ಇಲ್ಯಾಸ್ ತುಂಬೆ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಬೆಳ್ತಂಗಡಿಯಲ್ಲಿ ನವಾಜ್ ಶರೀಫ್ ಕಟ್ಟೆ ಅಥವಾ ಅಕ್ಬರ್ ಬೆಳ್ತಂಗಡಿ ಕಣಕ್ಕಿಳಿಯಬಹುದು ಎಂಬ ಮಾಹಿತಿ ಇದೆ. ಮೂಡುಬಿದಿರೆಗೆ ಆಲ್ಪೋನ್ಸಾ ಫ್ರಾಕೋ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಇನ್ನುಳಿದ ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಪುತ್ತೂರು, ಸುಳ್ಯ ಎರಡನೇ ಹಂತದ ಪಟ್ಟಿಯಲ್ಲಿ ಫೈನಲ್ ಆಗಲಿದೆ.