ಮುಡಿಪು: ನಿರ್ಲಕ್ಷ್ಯತನದ ಡ್ರೈವಿಂಗ್ ಗೆ ಬಾಲಕ ಬಲಿ; ಕಾರು ಚಾಲಕ ಪೊಲೀಸ್ ವಶಕ್ಕೆ
ಮಂಗಳೂರು: ಸಂಜೆ ಶಾಲೆ ಬಿಟ್ಟು ಬಸ್ ಗಾಗಿ ರಸ್ತೆ ಬದಿ ಕಾಯುತ್ತಿದ್ದ
ಸಂದರ್ಭ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ
ಮುಡಿಪು ಜ್ಯೂನಿಯರ್ ಕಾಲೇಜು ಬಳಿ ನಡೆದಿದೆ.
ಮಂಗಳವಾರ ಸಾಯಂಕಾಲ 4.10ರ ವೇಳೆಗೆ ಈ ಘಟನೆ ನಡೆದಿದ್ದು, ಪಜೀರು ನಿವಾಸಿ
ಹರೀಶ್ಚಂದ್ರ ಎಂಬವರ ಪುತ್ರ ಕಾರ್ತಿಕ್ ಹೆಚ್. (12) ಮೃತ ಬಾಲಕನಾಗಿದ್ದಾನೆ. 8 ನೇ ತರಗತಿಯಲ್ಲಿ ಕಲಿಯುತ್ತಿರುವ
ಕಾರ್ತಿಕ್ ಸಾಯಂಕಾಲ ಶಾಲೆ ಬಿಟ್ಟು ಮನೆಗೆ ತೆರಳುವ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಅತ್ಯಂತ ನಿರ್ಲಕ್ಷ್ಯದಿಂದ ಚಾಲನೆ ಮಾಡಿಕೊಂಡು ಬಂದ ಬ್ರೇಝಾ ಕಾರೊಂದು ಮೊದಲು ಬ್ಯಾರಿಕೇಡ್, ಬೈಕ್, ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಬಳಿಕ ಅಲ್ಲೇ ನಿಂತಿದ್ದ ಕಾರ್ತಿಕ್ ಮೇಲೆ ಹರಿದು ಮುಂದೆ ಸಾಗಿದೆ. ಈ ಸಂದರ್ಭ ಕಾರ್ತಿಕ್ ತಲೆಗೆ ಗಂಭೀರ ಗಾಯವಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ. ಬೇಜವಾಬ್ದಾರಿತನದಿಂದ ಕೂಡಿದ ಕಾರು ಚಾಲನೆ ಹಾಗೂ ಡಿಕ್ಕಿ ಹೊಡೆದ ದೃಶ್ಯಗಳು ಸ್ಥಳೀಯ ಅಂಗಡಿಯ ಸಿಸಿಟವಿಯಲ್ಲಿ ಸೆರೆಯಾಗಿದೆ.
ಈ ಕುರಿತು ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ
ಅಬ್ದುಲ್ ರಹಿಮಾನ್ ಎಂಬವರು ಪ್ರಕರಣ ದಾಖಲಿಸಿದ್ದಾರೆ. ಕಾರು ಚಲಾಯಿಸುತ್ತಿದ್ದವನನ್ನು ಪೊಲೀಸರು ವಶಕ್ಕೆ
ಪಡೆದಿದ್ದಾರೆ ಎನ್ನಲಾಗಿದೆ.