
ದೈವಾರಾಧನೆಗೆ ಅವಮಾನ | ಬೆಂಗಳೂರಿನ ಯುವತಿಯಿಂದ ಧರ್ಮಸ್ಥಳದಲ್ಲಿ ತಪ್ಪು ಕಾಣಿಕೆ!
ಮಂಗಳೂರು: ಸಾಮಾಜಿಕ ಜಾಲತಾಣ Instagram ನಲ್ಲಿ ಪಂಜುರ್ಲಿ ದೈವದಂತೆ ಬಣ್ಣ ಹಚ್ಚಿ ವೇಷ ಧರಿಸಿ ರೀಲ್ಸ್ ಮಾಡಿದ್ದ ಯುವತಿ ತನ್ನ ತಪ್ಪಿನ ಅರಿವಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿ ತಪ್ಪು ಕಾಣಿಕೆ ಸಲ್ಲಿಸಿದ್ದಾರೆ.
ಬೆಂಗಳೂರು ಮೂಲದ ಯುವತಿ, ಮೇಕಪ್ ಆರ್ಟಿಸ್ಟ್ ಶ್ವೇತಾ ರೆಡ್ಡಿ, ಕಾಂತಾರ ಸಿನೆಮಾದ ವರಹಾ ರೂಪಂ ಹಾಡಿಗೆ ಪಂಜುರ್ಲಿ ಬಣ್ಣ ಹಚ್ಚಿ ರೀಲ್ಸ್ ಮಾಡಿದ್ದರು. ಇದರ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತವಾದ ಬೆನ್ನಿಗೆ, ಆ ಯುವತಿ ಕ್ಷಮೆಯಾಚಿಸಿ ವೀಡಿಯೋ ಡಿಲಿಟ್ ಮಾಡಿದ್ದರು.
ಇದೀಗ ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ಆಗಮಿಸಿದ ಶ್ವೇತಾ, ತೀರ್ಥ ಸ್ನಾನ ಬಳಿಕ ದೇವಸ್ಥಾನಕ್ಕೆ ತೆರಳಿ ತಪ್ಪು ಕಾಣಿಕೆ ಹಾಕಿದರು.
"ದೈವಾರಾಧನೆ ಯಕ್ಷಗಾನದಂತೆಯೇ ಅಂದುಕೊಂಡಿದ್ದೆ. ಹಾಗಾಗಿ ವೇಷ ಹಾಕಿ ರೀಲ್ಸ್ ಮಾಡಿದ್ದೆ. ಆದರೆ ದೈವಾರಾಧನೆ ಬಗ್ಗೆ ಈಗಷ್ಟೇ ತಿಳಿದುಕೊಂಡಿದ್ದೇನೆ. ಮುಂದೆ ಏನೂ ತೊಂದರೆ ಆಗದಿರಲಿ ಅಂತಾ ತಪ್ಪು ಕಾಣಿಕೆ ಹಾಕಿದ್ದೇನೆ. ಮುಂದೆ ದೈವದ ಕೋಲ ನೋಡುವ ಅವಕಾಶ ಸಿಕ್ಕರೆ ನೋಡುತ್ತೇನೆ" ಎಂದು ಶ್ವೇತಾ ರೆಡ್ಡಿ ಹೇಳಿದ್ದಾರೆ.