Mangaluru: ಕೆದಂಬಾಡಿ ಪ್ರತಿಮೆ ಅನಾವರಣ ವೇದಿಕೆಯಲ್ಲೂ ಕೆಸರೆರಚಾಟ; 'ಪವಿತ್ರ ವೇದಿಕೆ' ಎನ್ನುತ್ತಲೇ ಖಾದರ್ - ಬೊಮ್ಮಾಯಿ ರಾಜಕೀಯ!
ಮಂಗಳೂರು: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮ ನಗರದ ಬಾವುಟಗುಡ್ಡೆಯಲ್ಲಿ ನಡೆಯಿತು. ಬಳಿಕ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ, ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಯುಟಿ ಖಾದರ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ರಾಜಕೀಯಕ್ಕೆ ಬಳಸಿಕೊಂಡರು. ಮಾತಿನ ಮೂಲಕ ಯುದ್ಧಕ್ಕೆ ನಿಂತ ಇಬ್ಬರು ನಾಯಕರ ಮಾತು ಸಭ್ಯ ಸಭಿಕರಿಗೆ ಇರಿಸು ಮುರಿಸು ಉಂಟು ಮಾಡುವಂತಿತ್ತು. ಯುಟಿ ಖಾದರ್ ಹೇಳಿಕೆ ಟಾಂಗ್ ನೀಡುತ್ತಲೇ ಸಿಎಂ ಮಾತಿನ ದಾಟಿ ಬದಲಾಯಿತು.
ಯುಟಿ ಖಾದರ್ ಹೇಳಿದ್ದೇನು!?
ಮೊದಲು ಮಾತನಾಡಿದ ಯುಟಿ ಖಾದರ್, ಪ್ರತಿಮೆ ಅನಾವರಣ ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಚಾರ. ಭವಿಷ್ಯದಲ್ಲಿ ಇದು ವಿದ್ಯಾರ್ಥಿಗಳಿಗೆ ಇತಿಹಾಸ ತಿಳಿಸಲು ಅಗತ್ಯವಾಗಿದೆ. ದ.ಕ ಜಿಲ್ಲೆಯಲ್ಲಿ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಜಿಲ್ಲೆಯಲ್ಲಿ ಇದ್ದಾರೆ. ಉತ್ತರ ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಕ್ಕ ಮಹತ್ವ ನಮ್ಮವರಿಗೆ ಸಿಕ್ಕಿಲ್ಲ. ಹಾಗಾಗಿ ಪಠ್ಯ ಪುಸ್ತಕದಲ್ಲಿ ರಾಮಯ್ಯ ಗೌಡರ ಪಠ್ಯ ಸೇರಿಸಬೇಕು. ಸ್ವಾತಂತ್ರ್ಯ ಹೋರಾಟಗಾರರು ಜಾತಿ, ಧರ್ಮ ಮೀರಿ ನಿಂತ ವ್ಯಕ್ತಿತ್ವವಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ತತ್ವ ನಮಗೆ ಮುಖ್ಯ ಆಗಬೇಕು, ಅವರ ಜಾತಿಯಲ್ಲ. ಎಲ್ಲರ ಇತಿಹಾಸಗಳು ಪಠ್ಯದಲ್ಲಿ ದಾಖಲಾಗಿ ಮುಂದಿನ ಪೀಳಿಗೆಗೆ ತಿಳಿಯಲಿ ಎಂದರು.
ಅಲ್ಲದೇ, ಸಿಎಂ ಬೊಮ್ಮಾಯಿ ಜಿಲ್ಲೆಗೆ ಯಾವುದೇ ಯೋಜನೆ ಇಲ್ಲ ಅಂದಿಲ್ಲ. ಮಂಗಳೂರು ಏರ್ ಪೋರ್ಟ್ ಗೆ ಅಬ್ಬಕ್ಕ ರಾಣಿ ಹಾಗೂ ರೈಲ್ವೇ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕು. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಗಮನ ಹರಿಸಲಿ. ಅದರ ಜೊತೆಗೆ ಜಿಲ್ಲೆಗೆ 100 ಕೋಟಿ ಅನುದಾನ ಈ ವೇದಿಕೆಯಲ್ಲಿ ಘೋಷಣೆ ಮಾಡಲಿ. ಅಲ್ಲದೇ, 2ಎ ಮೀಸಲಾತಿ ಇನ್ನು ಮುಂದೆ ಯಾರಿಗೂ ಕೊಡೋದು ಬೇಡ. ಇದರಿಂದ ಜಿಲ್ಲೆಯ ಹಲವು ಜಾತಿಗಳಿಗೆ ಸಮಸ್ಯೆ ಆಗುತ್ತದೆ.
ಈ ಮನವಿಯನ್ನ ಸಿಎಂ ಬೊಮ್ಮಾಯಿಯವರಿಗೆ ಹೇಳುತ್ತೇನೆ ಎಂದರು.
ಸಿಎಂ ಕೌಂಟರ್ ಏನು!?
ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ ಮಾತಿನ ಮೂಲಕ ಖಾದರ್ ಗೆ ಚಾಟಿ ಬೀಸಿದರು. ನಮ್ಮ ಮಣ್ಣಲ್ಲೇ ಹುಟ್ಟಿದ ಕ್ರಾಂತಿ ಪುರುಷರನ ಪ್ರತಿಮೆ ಸ್ಥಾಪನೆಗೆ ಇಷ್ಟು ವರ್ಷ ಬೇಕಾಯ್ತಾ? ಎಂದು ಪ್ರಶ್ನಿಸಿದ ಅವರು, ನಮ್ಮ ಯು.ಟಿ.ಖಾದರ್ ಒಳ್ಳೆ ಭಾಷಣ ಮಾಡ್ತಾರೆ, ಅವರ ಭಾಷಣದಲ್ಲಿ ಒಳಾರ್ಥ ಇರುತ್ತದೆ. ಖಾದರ್ ಆತ್ಮೀಯ ಸ್ನೇಹಿತನಾಗಿ ನನಗೆ ಅವರ ಒಳಾರ್ಥ ಗೊತ್ತು. ಕೆಲವೊಂದನ್ನು ವಿಧಾನಸೌಧದಲ್ಲಿ ಮಾತಾಡಬೇಕಾಗಿತ್ತದೆ. ಏಕೆಂದರೆ ಈ ವೇದಿಕೆ ಪವಿತ್ರವಾದುದು ಎಂದರು.
ಏರ್ ಪೋರ್ಟ್, ವಿಮಾನನಿಲ್ದಾಣಕ್ಕೆ ನಿಮ್ಮ ಸರ್ಕಾರವೇ ಇದ್ದಾಗ ಹೆಸರು ಇಡಬಹುದು. ಈ ದೇಶದಲ್ಲಿ ಬಹಳ ಪುಕ್ಕಟೆಯಾಗಿ ಸಲಹೆ ಸೂಚನೆ ಕೊಡಬಹುದು. ಆದರೆ ಮೊದಲು ಯಾಕೆ ಮಾಡಿಲ್ಲ ಅನ್ನೋದನ್ನ ಯೋಚಿಸಬೇಕು. ಕಳೆದುಹೋದ ಇತಿಹಾಸ ಹುಡುಕಿ ಕೊಟ್ಟ ಮಂಗಳೂರಿಗರಿಗೆ ಧನ್ಯವಾದಗಳು ಎಂದರು. ಕೊನೆಯದಾಗಿ ರಾಣಿ ಅಬ್ಬಕ್ಕ, ನಾರಾಯಣ ಗುರು ಹೆಸರಿಡಲು ಸರಕಾರ ಸ್ಪಂದಿಸುತ್ತದೆ ಎಂದರು.