
ಪ್ರತಿಭಾ ಕುಳಾಯಿ ವಿರುದ್ಧ ಅಶ್ಲೀಲ ಪೋಸ್ಟ್ | ಬಿಜೆಪಿ ವಿರುದ್ಧ ಹೋರಾಟ ಸಮಿತಿ ಕಿಡಿ
ಮಂಗಳೂರು: NITK ಟೋಲ್ ಗೇಟ್ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ವಿರುದ್ಧ ಅಶ್ಲೀಲವಾಗಿ ಮಾಡಲಾದ ಟ್ರೋಲ್ ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಅಶ್ಲೀಲ ರೀತಿಯಲ್ಲಿ ಮಾಡಲಾದ ಟ್ರೋಲ್ ಗೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಅಕ್ಟೋಬರ್ 18 ರಂದು ಸುರತ್ಕಲ್ NITK ಟೋಲ್ ಗೇಟ್ ಮುಂಭಾಗ ಭಾರೀ ಪ್ರತಿಭಟನೆ ನಡೆದಿತ್ತು. ಈ ಸಂದರ್ಭ ಪ್ರತಿಭಾ ಕುಳಾಯಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅದಾಗ ಪೊಲೀಸರ ವಿರುದ್ಧ ಪ್ರತಿಭಾ ಪ್ರತಿರೋಧ ತೋರಿದ್ದರು. ಇದೇ ವೀಡಿಯೋ ತುಣುಕು ಕಳೆದ ಎರಡು ದಿನಗಳಿಂದ ನಾನಾ ಬಗೆಯ ಟ್ರೋಲ್ ಗೆ ಒಳಗಾಗಿತ್ತು. ಬಿಜೆಪಿ ಹಾಗೂ ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಟ್ರೋಲ್ ಮಾಡಿದ್ದರು.
ಮುಂದುವರಿದು ಹಿಂದೂ ಸಂಘಟನೆ ಕಾರ್ಯಕರ್ತ ಕೆಆರ್ ಶೆಟ್ಟಿ ಅಡ್ಯಾರ್ ಪದವು ಎಂಬಾತ ವೀಡಿಯೋ ಶೇರ್ ಮಾಡಿ, ಕಾಮೆಂಟ್ ಮಾಡುವಂತೆ ಪೋಸ್ಟ್ ಹರಿಬಿಟ್ಟಿದ್ದ. ಇದನ್ನ ರೀಪೋಸ್ಟ್ ಮಾಡುತ್ತಾ ಕಹಳೆ ನ್ಯೂಸ್ ಮುಖ್ಯಸ್ಥ ಶ್ಯಾಮ್ ಸುದರ್ಶನ್ ಭಟ್ ಎಂಬಾತ ಕೆಟ್ಟದ್ದಾಗಿ ಪೋಸ್ಟ್ ಮಾಡಿದ್ದ. ಇದೀಗ ಈ ಪೋಸ್ಟ್ ಟೋಲ್ ವಿರೋಧಿ ಹೋರಾಟಗಾರರ ಗಮನಕ್ಕೆ ಬಂದಿದ್ದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಖುದ್ದು ಪ್ರತಿಭಾ ಕುಳಾಯಿ ಅವರೇ ಸುದ್ದಿಗೋಷ್ಟಿ ನಡೆಸಿ ಕಿಡಿಕಾರಿದ್ದಾರೆ.
ಟೋಲ್ ಗೇಟ್ ಹೋರಾಟ ಸಮಿತಿಯು ಶ್ಯಾಮ್ ಸುದರ್ಶನ್ ಭಟ್ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧರಿಸಿದೆ.
ಶ್ಯಾಮ ಸುದರ್ಶನ ಜೈಲಿಗೆ ಹೋಗಬೇಕು: ಮುನೀರ್ ಕಾಟಿಪಳ್ಳ
ಟೋಲ್ ಗೇಟ್ ವಿರೋಧಿ ಹೋರಾಟ ಸಂಚಾಲಕ, ಡಿವೈಎಫ್ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರತಿಕ್ರಿಯಿಸಿದ್ದು, ಇದು ಮಹಿಳಾ ಹೋರಾಟಗಾರ್ತಿಯರು ಬೀದಿಗಿಳಿದು ಹೋರಾಟ ಮಾಡದಂತೆ ಮಾಡುವ ಮನೋಸ್ಥಿತಿಯಾಗಿದೆ. ಇಂತಹ ಟ್ರೋಲ್ ಗಳನ್ನು ಸಹಿಸಲು ಸಾಧ್ಯವಿಲ್ಲ. ಶ್ಯಾಮ್ ಸುದರ್ಶನ್ ಮಾಡಿರುವ ಪೋಸ್ಟ್ ಅತ್ಯಂತ ಅಶ್ಲೀಲತೆಯಿಂದ ಕೂಡಿದೆ. ಹಾಗಾಗಿ ಆತನ ವಿರುದ್ಧ ದೂರು ದಾಖಲಿಸಲಿದ್ದೇವೆ. ಆತ ಜೈಲಿಗೆ ಹೋಗಲೇಬೇಕು ಎಂದಿದ್ದಾರೆ.
ಶ್ಯಾಮ್ ಸುದರ್ಶನ್ ತನ್ನ ಫೇಸ್ಬುಕ್ ಪೋಸ್ಟ್ ವಿವಾದ ಪಡೆಯುತ್ತಿದ್ದಂತೆ ತನ್ನ ಫೇಸ್ಬುಕ್ ಖಾತೆಯನ್ನು ಲಾಕ್ ಮಾಡಿದ್ದಾಗಿ ಮಹಿಳಾ ಹೋರಾಟಗಾರರು ತಿಳಿಸಿದ್ದಾರೆ.