-->
ದೈವಾರಾಧನೆ ಹಿಂದೂ ಧರ್ಮದ ಭಾಗ ಹೌದಾ, ಅಲ್ವ ಗೊತ್ತಿಲ್ಲ: ಡಾ.ವೀರೇಂದ್ರ ಹೆಗಡೆ

ದೈವಾರಾಧನೆ ಹಿಂದೂ ಧರ್ಮದ ಭಾಗ ಹೌದಾ, ಅಲ್ವ ಗೊತ್ತಿಲ್ಲ: ಡಾ.ವೀರೇಂದ್ರ ಹೆಗಡೆ



ಮಂಗಳೂರು: ದೈವರಾಧನೆ ಹಿಂದೂ ಧರ್ಮ‌ದ ಭಾಗ ಹೌದಾ, ಅಲ್ವ ಅನ್ನೋದು ಗೊತ್ತಿಲ್ಲ. ಆದರೆ, ದೈವಾರಾಧನೆ ಬಿಟ್ಟಿರಲು ಸಾಧ್ಯವಿಲ್ಲ ಅಂತಾ ರಾಜ್ಯಸಭಾ ಸದಸ್ಯ, ಧರ್ಮಸ್ಥಳದ ಧರ್ಮಾಧಿಕಾರಿ‌ ಡಾ.ವೀರೇಂದ್ರ ಹೆಗಡೆ ಹೇಳಿದರು. 

ಶುಕ್ರವಾರ ನಗರದ ಬಿಗ್ ಸಿನೆಮಾಸ್ ನಲ್ಲಿ ತಮ್ಮ ಕುಟುಂಬ ಹಾಗೂ ಚಿತ್ರ ತಂಡದೊಂದಿಗೆ 'ಕಾಂತಾರ' ಸಿನೆಮಾ ವೀಕ್ಷಿಸಿದ ಬಳಿಕ ಅವರು ನಟ ಚೇತನ್ ಅವರ ಹೇಳಿಕೆಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದರು. 

ಧರ್ಮದ ಮೂಲವನ್ನು ಹುಡುಕುತ್ತಾ ಹೋದರೆ ಎಲ್ಲಿಯೂ ಸಿಗದು. ದೈವಾರಾಧನೆಯು ಎರಡು ಜಿಲ್ಲೆಯಲ್ಲಿ ವ್ಯಾಪಕ ನಂಬಿಕೆ ಪಡೆದಿದೆ. ಚೇತನ್ ಹಿಂದೂ ಧರ್ಮದ ಯಾವ ಸೂಕ್ಷ್ಮತೆ ಅರಿತಿದ್ದಾರೆ ಗೊತ್ತಿಲ್ಲ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲವನ್ನು ಅರಿಯದೇ ಮಾತಾಡಿದಾಗ ಬೇರೆ ಅರ್ಥ ಬರುತ್ತದೆ ಎಂದರು. 

ದೈವಾರಾಧನೆ ಈ ನಾಡಿನಲ್ಲಿ ಸ್ವಾಭಾವಿಕವಾಗಿ ನಂಬಿಕೆ, ನಡವಳಿಕೆ ಹಾಗೂ ಆಚರಣೆ ಆಗಿ ಬಂದಿದೆ‌. ಇದನ್ನು ವಿಮರ್ಶಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. 


ಚಿತ್ರಕ್ಕೆ ಮೆಚ್ಚುಗೆ:

ಇದಕ್ಕೂ‌ ಮುನ್ನ 'ಕಾಂತಾರ' ಚಿತ್ರದ ಕುರಿತು ಮಾತನಾಡಿದ ಹೆಗಡೆ, ಇತ್ತೀಚಿನ ದಿನಗಳಲ್ಲಿ ಸಿನಿಮಾ‌ ನೋಡದೆ ಬಹಳ ದಿನವಾಗಿತ್ತು. ಕಾಂತಾರದಲ್ಲಿ ದೈವಾರಾಧನೆಯನ್ನು ಬಹಳ‌ ಚೆನ್ನಾಗಿ ರಿಷಬ್ ಶೆಟ್ಟಿ ತೋರಿಸಿದ್ದಾರೆ. ಚಿತ್ರದಲ್ಲಿ ಯುವಕರಿಗೆ ‌ಹೊಸ ಕಥೆ ,ಹಳೆಯ ಸ್ಮರಣೆ ಆಗುತ್ತದೆ. ಜಾತಿ, ಮತ ಬೇಧ ಮರೆತು ಸಹಬಾಳ್ವೆ ಮಾಡಬೇಕೆಂಬ ಸಂದೇಶ ಈ ಚಿತ್ರದಲ್ಲಿ ಇದೆ ಎಂದರು.

"ಕಾಂತಾರಾ ಚಿತ್ರ ನೋಡಿ ಬಹಳ ಸಂತೋಷವಾಗಿದೆ. ಚಿತ್ರ ನೋಡಿದ ಬಳಿಕ ಮೂಡ್ ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಕಲಾವಿದರಿಗೂ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಬೆಳೆಯುತ್ತಿರುವ ತಂತ್ರಜ್ಞಾನ ವನ್ನು ರಿಷಬ್ ಶೆಟ್ಟಿ ಹೇಗೆ ಬಳಸಿದ್ದಾರೆ ಅನ್ನೋದು ಚಿತ್ರದಲ್ಲಿ ನೋಡಿದ್ದೇನೆ. ದೈವಗಳು ಸತ್ಯಕ್ಕೆ ಮಾತ್ರ ಬೆಲೆ ಕೊಡುತ್ತದೆ ಅನ್ನೋದು ಚಿತ್ರದಲ್ಲೂ ಮೂಡಿ ಬಂದಿದೆ" ಎಂದರು.





Ads on article

Advertise in articles 1

advertising articles 2

Advertise under the article