-->
ಅಕ್ಟೋಬರ್ 25 ರಂದು ಸೂರ್ಯ ಗ್ರಹಣ | ಕರಾವಳಿಯ ದೇಗುಲಗಳಲ್ಲಿ ಹಲವು ಬದಲಾವಣೆ

ಅಕ್ಟೋಬರ್ 25 ರಂದು ಸೂರ್ಯ ಗ್ರಹಣ | ಕರಾವಳಿಯ ದೇಗುಲಗಳಲ್ಲಿ ಹಲವು ಬದಲಾವಣೆ



ಮಂಗಳೂರು: ಅಕ್ಟೋಬರ್ 25 ರ ಮಂಗಳವಾರದಂದು ಸೂರ್ಯ ಗ್ರಹಣ ಸಂಭವಿಸಲಿದೆ. ಸಾರ್ವಜನಿಕರಿಗೆ ರಾಜ್ಯದ ಬಹುತೇಕ ಭಾಗಗಳಲ್ಲಿ ಸೂರ್ಯ ಗ್ರಹಣ ಕಂಡು ಬರಲಿದೆ. ಹಿಂದೂ ಧಾರ್ಮಿಕ ಆಚರಣೆ ಮೇಲೂ ಈ ಸೂರ್ಯಗ್ರಹಣವು ಪ್ರಭಾವ ಬೀರುವ ದಕ್ಷಿಣ ಕನ್ನಡ ಜಿಲ್ಲೆಯ ಹಲವು‌ ಪ್ರಮುಖ ದೇಗುಲಗಳಲ್ಲಿ ದೇವರ ದರ್ಶನ ಹಾಗೂ ಇತರೆ ಸೇವೆಗಳಲ್ಲಿ ಬದಲಾವಣೆ ಕಾಣಬಹುದಾಗಿದೆ. ಆದ್ದರಿಂದ ಸೂರ್ಯ ಗ್ರಹಣ ದಿನ ದೇಗುಲಕ್ಕೆ ತೆರಳುವವರು ಕಡ್ಡಾಯವಾಗಿ ಈ ಬದಲಾವಣೆಯನ್ನು ಗಮನಿಸಬೇಕಾಗುತ್ತದೆ.


ಕುಕ್ಕೆ ಸುಬ್ರಹ್ಮಣ್ಯ

ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೂರ್ಯ ಗ್ರಹಣ ದಿನ ಅಕ್ಟೋಬರ್ 25 ರಂದು ಯಾವುದೇ ಸೇವೆಗಳು, ದರ್ಶನ ಹಾಗೂ ಭೋಜನ ಪ್ರಸಾದ ವ್ಯವಸ್ಥೆ ಇರುವುದಿಲ್ಲ. ಮರುದಿನ‌ ಅಕ್ಟೋಬರ್ 26ರಂದು ಕ್ಷೇತ್ರದಲ್ಲಿ ನಿತ್ಯ ಪೂಜಾ ಸಮಯಗಳಲ್ಲೂ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ ಗಂಟೆ 9 ಯಿಂದ ಭಕ್ತಾದಿಗಳಿಗೆ ಶ್ರೀ ದೇವರ ದರ್ಶನ, ಸೇವೆಗಳು ಆರಂಭಗೊಳ್ಳಲಿವೆ.

ಧರ್ಮಸ್ಥಳ ಮಂಜುನಾಥ

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನದ ಸಮಯದಲ್ಲಿ ಕೊಂಚ ಬದಲಾವಣೆಯನ್ನಷ್ಟೇ ಮಾಡಲಾಗಿರುತ್ತದೆ. ಸೂರ್ಯ ಗ್ರಹಣವು ಸಾಯಂಕಾಲ ಘಟಿಸುವುದರಿಂದ ಮಧ್ಯಾಹ್ನದವರೆಗೆ ಎಂದಿನಂತೆ ದೇವರ ದರ್ಶನ, ಅನ್ನ ಪ್ರಸಾದಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 2.30ರಿಂದ ರಾತ್ರಿ 7.30ರ ವರೆಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಅಲ್ಲದೇ, ಅನ್ನಛತ್ರದಲ್ಲಿ ಮಧ್ಯಾಹ್ನ 2.30 ರವರೆಗೆ ಭೋಜನದ ವ್ಯವಸ್ಥೆಯೂ ಇರಲಿದೆ. ಮಾತ್ರವಲ್ಲದೇ ರಾತ್ರಿ 7.30 ರ ನಂತರ ಮತ್ತೆ ಅನ್ನ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಕ್ಷೇತ್ರದ ಪ್ರಕಟಣೆಯು ತಿಳಿಸಿದೆ.

ಕಟೀಲು ದುರ್ಗಾ ಪರಮೇಶ್ವರಿ

ಕರಾವಳಿಯ ಪ್ರಸಿದ್ಧ ದೇವಿ ದೇವಸ್ಥಾನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ಸಣ್ಣ ಮಟ್ಟಿನ‌ ಬದಲಾವಣೆ ಅಷ್ಟೇ ಕಾಣಬಹುದಾಗಿದೆ. ಸೂರ್ಯಗ್ರಹಣ ದಿನ ಮಧ್ಯಾಹ್ನ ಎಂದಿನಂತೆ ಅನ್ನಪ್ರಸಾದವಿರುತ್ತದೆ. ಗ್ರಹಣ‌ ಸಮಯದಲ್ಲೂ‌ ದೇಗುಲಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಗ್ರಹಣದಿಂದ ಮೋಕ್ಷದ ಅವಧಿವರೆಗೂ ಭಕ್ತರಿಗೆ ದೇವಳಕ್ಕೆ ಸುತ್ತು ಬರಲು ಹಾಗೂ ಜಪ ಮಾಡಬಹುದಷ್ಟೇ. ಅದರ ಹೊರತಾಗಿ ಈ ಅವಧಿಯಲ್ಲಿ ಯಾವುದೇ ಸೇವೆ, ಪ್ರಸಾದ ವಿತರಣೆ ಇರುವುದಿಲ್ಲ.

ಬಪ್ಪನಾಡು ದುರ್ಗಾಪರಮೇಶ್ವರಿ

ದೇವಿ ದೇವಸ್ಥಾನ ಮಂಗಳೂರು ಹೊರವಲಯದ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೂರ್ಯ ಗ್ರಹಣ ಸಮಯದಲ್ಲಿ ಯಾವುದೇ ಸೇವೆ, ಪೂಜೆ, ಪ್ರಸಾದ ವಿತರಣೆ ನಡೆಯದು. ಅಂದು ಸಂಜೆ 4.45ರಿಂದ 6.45ರ ವರೆಗೆ ಯಾವುದೇ ಪೂಜೆ, ಸೇವೆ, ಪ್ರಸಾದ ವಿತರಣೆ ಇರುವುದಿಲ್ಲ. ಸಂಜೆ 6.45ರ ಬಳಿಕ ನಿತ್ಯ ಪೂಜೆ ಜರುಗಲಿದೆ. ಆದರೆ, ಮಧ್ಯಾಹ್ನ ಜರುಗುವ ಅನ್ನಪ್ರಸಾದ ಇರುವುದಿಲ್ಲ.

Ads on article

Advertise in articles 1

advertising articles 2

Advertise under the article